ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದ ಐವರು ಶಂಕಿತ ಉಗ್ರರನ್ನು ಗುಜರಾತ್ ಉಗ್ರನಿಗ್ರಹ ದಳ (ATS) ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಬಂಧಿಸಿದೆ.
ಬಂಧಿತರನ್ನು ಬಿಲಾಲ್ ಅಬಿದ್ ಶೇರಾ, ಮೊಹಮ್ಮದ್ ಆಯೂಬ್ ಖಾಡಿವಾಲ್, ಮೊಹಮ್ಮದ್ ಶಾಪಿ ಮುಖಿ, ಮೊಹಮ್ಮದ್ ಹಸನ್ ಕರಾಡಿಯಾ ಮತ್ತು ಮೊಹಮ್ಮದ್ ಆಯೂಬ್ ಸುನಾಸರಾ ಎಂದು ಗುರುತಿಸಲಾಗಿದೆ. ಮುಂಚಿತವಾಗಿ ಬಂಧಿಸಲಾಗಿದ್ದ ಇತರ ಆರೋಪಿಗಳ ವಿಚಾರಣೆ ವೇಳೆ ಸಿಕ್ಕ ಸುಳಿವಿನ ಆಧಾರದ ಮೇಲೆ ಈ ಐವರನ್ನು ಸೆರೆಹಿಡಿಯಲಾಗಿದೆ.
ಟೈಮ್ ಬಾಂಬ್ ತಯಾರಿಕೆಯ ಸಂಚು
ಬಂಧಿತ ಶಂಕಿತರಲ್ಲಿ ಒಬ್ಬಾತ ಸ್ಫೋಟಕಗಳ ತಯಾರಿಕೆಯಲ್ಲಿ ತಜ್ಞನಾಗಿದ್ದು, ವಿನಾಶಕಾರಿ ಟೈಮ್ ಬಾಂಬ್ ಒಂದನ್ನು ರೂಪಿಸುವ ಅಂತಿಮ ಹಂತದಲ್ಲಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಈ ಸ್ಫೋಟಕ ಸಾಧನಗಳ ಪರೀಕ್ಷಾರ್ಥ ಪ್ರಯೋಗದಲ್ಲೂ ಇವರು ಭಾಗಿಯಾಗಿದ್ದರು. ಆದರೆ, ಎಟಿಎಸ್ ಅಧಿಕಾರಿಗಳು ನಿಖರ ಮಾಹಿತಿ ಆಧರಿಸಿ ದಾಳಿ ನಡೆಸುವ ಮೂಲಕ ಬಾಂಬ್ ತಯಾರಿಕೆ ಪೂರ್ಣಗೊಳ್ಳುವ ಮುನ್ನವೇ ಇವರನ್ನು ಹೆಡೆಮುರಿ ಕಟ್ಟಿದ್ದಾರೆ.
ಪಾಕಿಸ್ತಾನದಿಂದ ಹಣಕಾಸಿನ ನೆರವು
ಆರೋಪಿಗಳು ಸೋಶಿಯಲ್ ಮೀಡಿಯಾ ಮೂಲಕ ಯುವಕರನ್ನು ಸಂಪರ್ಕಿಸಿ ದೇಶವಿರೋಧಿ ಕೃತ್ಯಗಳಿಗೆ ಪ್ರೇರೇಪಿಸುತ್ತಿದ್ದರು. ಈ ಜಾಲಕ್ಕೆ ಪಾಕಿಸ್ತಾನಿ ಹ್ಯಾಂಡ್ಲರ್‌ಗಳಿಂದ ದೊಡ್ಡ ಮಟ್ಟದ ಹಣಕಾಸಿನ ನೆರವು ಸಿಗುತ್ತಿತ್ತು. ಅಲ್ಲದೆ, ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವಂತೆಯೂ ಹ್ಯಾಂಡ್ಲರ್‌ಗಳು ಇವರಿಗೆ ನಿರ್ದೇಶನ ನೀಡಿದ್ದರು ಎನ್ನಲಾಗಿದೆ. ಇದೇ ತಿಂಗಳ ಆರಂಭದಲ್ಲಿ ಎಂಟು ಜನರನ್ನು ಬಂಧಿಸಲಾಗಿದ್ದು, ಸದ್ಯ ಸಿಕ್ಕಿರುವ ಐವರನ್ನು ಕೋರ್ಟ್ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳು ತನಿಖೆಯನ್ನು ತೀವ್ರಗೊಳಿಸಿವೆ.



