ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿಎಂ ವಿಜಯ್ ಹೊಸ ಹೊಸ ಯೋಜನೆಗಳತ್ತ ಗಮನಹರಿಸಿದ್ದು, ಇದೀಗ ಅಚ್ಚರಿಯ ಎಂಬಂತೆ ಅಂದಿನ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾದ ಅಮ್ಮ ಕ್ಯಾಂಟೀನ್‌ಗಳ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನವೀಕರಿಸಲು ಮತ್ತು ವಿತರಿಸಲಾಗುವ ಆಹಾರದ ಗುಣಮಟ್ಟವನ್ನು ಸುಧಾರಿಸಲು ಆದೇಶ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ವಿಜಯ್ ಸೋಮವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಈ ವೇಳೆ ಕ್ಯಾಂಟೀನ್‌ಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿದರು.
ಕಳಪೆ ಆಹಾರದ ಕುರಿತು ನಿರಂತರ ದೂರು
ತಮಿಳುನಾಡಿನಾದ್ಯಂತ ಇರುವ ಅಮ್ಮ ಕ್ಯಾಂಟೀನ್‌ಗಳಲ್ಲಿ ಸಿಗುವ ಆಹಾರದ ರುಚಿ ಮತ್ತು ಗುಣಮಟ್ಟ ಉತ್ತಮ ಇಲ್ಲದೇ ಇರುವ ಕುರಿತು ನಿರಂತರ ದೂರು ಬರುವುದನ್ನು ಗಮನಿಸಿದ ಸಿಎಂ ವಿಜಯ್, ತಕ್ಷಣವೇ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಕ್ಯಾಂಟೀನ್ ಗೆ ಮರುಜೀವ ನೀಡಿದ ಸಿಎಂ ವಿಜಯ್
ಕ್ಯಾಂಟೀನ್‌ಗಳಲ್ಲಿ ಸೌಕರ್ಯಗಳು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ವಚ್ಛತೆಯನ್ನು ಸುಧಾರಿಸಬೇಕು. ಅಡುಗೆ ಪಾತ್ರೆಗಳು,ಸಲಕರಣೆಗಳ ಖರೀದಿಯಲ್ಲಿ ಸುಧಾರಣೆಗೆ ಆದೇಶಿಸಿದ್ದು, ಜನರಿಗೆ ಗುಣಮಟ್ಟದ ಮತ್ತು ರುಚಿಕರವಾದ ಆಹಾರವನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
2013ರಲ್ಲಿ ಅಮ್ಮ ಕ್ಯಾಂಟೀನ್ ಗೆ ಸಿಕ್ಕಿತು ಚಾಲನೆ
2013 ರಲ್ಲಿ ಎಐಎಡಿಎಂಕೆ ಅಧಿನಾಯಕಿ ಮಾಜಿ ಮುಖ್ಯಮಂತ್ರಿ ದಿ . ಜೆ. ಜಯಲಲಿತಾ ಅವರ ಆಡಳಿತಾವಧಿಯಲ್ಲಿ (2011-2016) ಈ ಅಮ್ಮ ಕ್ಯಾಂಟೀನ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರೀತಿಯಿಂದ ಜಯಲಲಿತಾ ಅವರನ್ನು ಅಮ್ಮ ಎಂದು ಕರೆಯುತ್ತಿದ್ದ ಕಾರಣ, ಈ ಯೋಜನೆಗೆ ಅಮ್ಮ ಕ್ಯಾಂಟೀನ್ ಎಂದು ಹೆಸರಿಡಲಾಗಿತ್ತು. ಇಲ್ಲಿ ಕೇವಲ 1 ರೂಪಾಯಿಗೆ ಇಡ್ಲಿ, 5 ರೂಪಾಯಿಗೆ ಸಾಂಬಾರ್ ರೈಸ್ ನೀಡುವ ಮೂಲಕ ಈ ಯೋಜನೆ ಇಡೀ ದೇಶದಲ್ಲೇ ಮಾದರಿಯಾಗಿತ್ತು.



