October 11, 2026
Sunday, October 11, 2026
spot_img

ಕೆಪಿಎಸ್‌ಸಿ ನೇಮಕಾತಿ ಸ್ಕ್ಯಾಮ್‌! ಮಧ್ಯವರ್ತಿ ಬಸವರಾಜ ಕನ್ನಾಳೆ ಅರೆಸ್ಟ್‌: ಸೆ.9ರವರೆಗೆ ಸಿಐಡಿಗೆ ಕಸ್ಟಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣ ಪ್ರಕರಣದಲ್ಲಿ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಹಗರಣದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಡಿ ಅಧಿಕಾರಿಗಳು ಈಗಷ್ಟೇ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಮಧ್ಯವರ್ತಿ, ಬಿಜೆಪಿ ಮುಖಂಡರಾದ ಬಸವರಾಜ್‌ ಕನ್ನಾಳೆ ಅವರನ್ನು ಬಂಧಿಸಿದ್ದಾರೆ. ಸದ್ಯ ಬಂಧನಕ್ಕೊಳಗಾಗಿರುವ ಗ್ಯಾನೇಂದ್ರ ಕುಮಾರ್‌ ಹಾಗೂ ಬಸವರಾಜ ಕನ್ನಾಳೆ ಅವರನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಿದ್ದು, ಸೆಪ್ಟೆಂಬರ್‌ 9ರ ವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಭಾಲ್ಕಿಯ ಡೋಣಗಾಪುರ ಗ್ರಾಮದ ನಿವಾಸಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯ ಬಸವರಾಜ್‌ ಕನ್ನಾಳೆ ಅವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಸಿಐಡಿ ಅಧಿಕಾರಿಗಳು ಅರೆಸ್ಟ್‌ ಮಾಡಿದ್ದರು.

ಗ್ಯಾನೇಂದ್ರಕುಮಾರ್‌ ಮಾಸ್ಟರ್‌ ಮೈಂಡ್‌!

ಸಿಐಡಿ ತನಿಖೆ ವೇಳೆ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದ ರೂವಾರಿ ಗ್ಯಾನೇಂದ್ರ ಕುಮಾರ್‌ ಎಂದು ಹೇಳಲಾಗಿದೆ. ಎಲ್ಲ ಪರೀಕ್ಷೆಗಳ ಉಸ್ತುವಾರಿ ಹಾಗೂ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್‌ ಸ್ಕ್ಯಾಮ್‌ನ ಸೂತ್ರದಾರ ಎಂದು ತಿಳಿದುಬಂದಿದೆ.

ಒಂದೊಂದು ಪತ್ರಿಕೆ 40 ಲಕ್ಷ ರೂಪಾಯಿ

ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಪ್ರಶ್ನೆಪತ್ರಿಕೆಗಳನ್ನು ಲೀಕ್‌ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ಮಧ್ಯವರ್ತಿಯಾಗಿರುವ ಬಸವರಾಜ ಕನ್ನಾಳೆ ಅಭ್ಯರ್ಥಿಗಳಿಗೆ 40 ಲಕ್ಷ ರೂಪಾಯಿಗೆ ಒಂದು ಪ್ರಶ್ನೆ ಪತ್ರಿಕೆಯಂತೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಸಾಕ್ಷ್ಯನಾಶಕ್ಕಾಗಿ ಒಎಂಆರ್‌ ಶೀಟ್‌ ತಿದ್ದುಪಡಿ ಮಾಡಿರುವುದು ಪತ್ತೆಯಾಗಿದೆ.

Must Read