August 29, 2026
Saturday, August 29, 2026
spot_img

ಜಮೀನು ಗಡಿ ವಿಚಾರಕ್ಕೆ ಕಿತ್ತಾಟ: ಮಾಜಿ ಗ್ರಾ.ಪಂ ಸದಸ್ಯನ ವಿರುದ್ಧ ಮಚ್ಚಿನಿಂದ ಹಲ್ಲೆಗೆ ಯತ್ನದ ಆರೋಪ

ಹೊಸದಿಗಂತ ವರದಿ ಹಾಸನ:

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಜಮೀನು ಮಾಲೀಕರ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ವಾಟೇಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ಶೆಟ್ಟಿ ವಿರುದ್ಧ ದೇವರಾಜ್ ವಾಟೇಹಳ್ಳಿ ಆರೋಪ ಮಾಡಿದ್ದಾರೆ.

ಈ ವೇಳೆ ದೇವರಾಜ್ ವಾಟೇಹಳ್ಳಿ ಮಾತನಾಡಿ, ಗುಜ್ಜನಹಳ್ಳಿ ಗ್ರಾಮದ ಕೃಷ್ಣರಾಜ್ ಅರಸ್ ಅವರಿಗೆ ಸೇರಿದ ಜಮೀನಿನ ಸರ್ವೆ ಕಾರ್ಯವನ್ನು ಈಗಾಗಲೇ ಮೂರು ಬಾರಿ ನಡೆಸಲಾಗಿದ್ದು, ಬಾಂದ್ ಕಲ್ಲುಗಳನ್ನು ಸಹ ಅಳವಡಿಸಲಾಗಿದೆ. ಆದರೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ಶೆಟ್ಟಿ ಅವರು ಸುಮಾರು 20 ಅಡಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸೋಲಾರ್ ಕಂಬ ಅಳವಡಿಸಲು ಮುಂದಾಗಿದ್ದರು. ಇದನ್ನು ಕೃಷ್ಣರಾಜ್ ಅರಸ್ ಪ್ರಶ್ನಿಸಿದಾಗ ಮಚ್ಚಿನಿಂದ ಮೂರು ಬಾರಿ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಇಷ್ಟೇ ಅಲ್ಲದೆ, ಗ್ರಾಮದ 3.11 ಎಕರೆ ಸರ್ಕಾರಿ ಕೆರೆಯ ಪೈಕಿ ಸುಮಾರು ಒಂದು ಎಕರೆ ಜಾಗವನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಹಲ್ಲೆಗೆ ಯತ್ನಿಸಿದ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ದೇವರಾಜ್ ವಾಟೇಹಳ್ಳಿ ಆಗ್ರಹಿಸಿದರು.

ಇದನ್ನೂ ಓದಿ:

ಜಮೀನು ಮಾಲೀಕ ಕೃಷ್ಣರಾಜ್ ಅರಸ್ ಮಾತನಾಡಿ, ವಾಟೇಹಳ್ಳಿ ಗ್ರಾಮದ ಸರ್ವೆ ನಂಬರ್ 24/2ರಲ್ಲಿ ತಮ್ಮ ಜಮೀನು ಇದೆ. ಜಮೀನಿನ ಅತಿಕ್ರಮಣದ ಕುರಿತು ನ್ಯಾಯ ಕೇಳಲು ತೆರಳಿದ್ದ ಸಂದರ್ಭದಲ್ಲಿ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಸ್ಥಳದಲ್ಲಿದ್ದ ಮೂವರು ಕಾರ್ಮಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.

ಜಮೀನು ವ್ಯಾಜ್ಯದ ಕುರಿತು ಗ್ರಾಮಸ್ಥರಿಗೂ ಮಾಹಿತಿ ನೀಡಲಾಗಿದೆ. ಜಮೀನಿನ ಸರ್ವೆ ಕಾರ್ಯ ಮೂರು ಬಾರಿ ನಡೆದಿದ್ದರೂ ಅದನ್ನು ಒಪ್ಪದೆ ಬೇಕಾಬಿಟ್ಟಿಯಾಗಿ ಬೇಲಿ ಹಾಕಲಾಗುತ್ತಿದೆ. ಆದ್ದರಿಂದ ಜಮೀನಿನ ಗಡಿ ಹಾಗೂ ಹಕ್ಕಿನ ಕುರಿತು ಸೂಕ್ತ ತನಿಖೆ ನಡೆಸಿ ತಮಗೆ ನ್ಯಾಯ ಒದಗಿಸಬೇಕು ಎಂದು ಕೃಷ್ಣರಾಜ್ ಅರಸ್ ಮನವಿ ಮಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !