June 14, 2026
Sunday, June 14, 2026
spot_img

ಎಲ್‌ಡಿಎಫ್‌ ಇತಿಹಾಸದಲ್ಲೇ ಅತಿ ಕಡಿಮೆ ಮತ ಗಳಿಕೆ: ಸಿಪಿಎಂ ಆತಂಕ ಹೆಚ್ಚಿಸುತ್ತಿದೆ ಕೇರಳದಲ್ಲಿ ಬಿಜೆಪಿ ಪ್ರಭಾವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್‌ಗೆ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮತ ಲಭಿಸಿರುವುದನ್ನು ಸಿಪಿಎಂ ರಾಜ್ಯ ಸಮಿತಿ ಅಂಗೀಕರಿಸಿರುವ ಚುನಾವಣಾ ಪರಿಶೀಲನಾ ವರದಿ ಒಪ್ಪಿಕೊಂಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಡರಂಗದ ಮತಗಳ ಪ್ರಮಾಣ ಕುಸಿದಿರುವುದು ವರದಿಯಲ್ಲಿ ಪ್ರಮುಖ ಆತಂಕವಾಗಿ ಉಲ್ಲೇಖವಾಗಿದೆ.

2024ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಎಲ್‌ಡಿಎಫ್ ಹೆಚ್ಚಿನ ಮತಗಳನ್ನು ಗಳಿಸಿದ್ದರೂ, ಹಿಂದಿನ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿದಾಗ ಮತಗಳ ಕುಸಿತ ಗಂಭೀರವಾಗಿದೆ ಎಂದು ವರದಿ ವಿಶ್ಲೇಷಿಸಿದೆ. ಈ ಬೆಳವಣಿಗೆ ಪಕ್ಷದ ಸಂಘಟನಾ ಮಟ್ಟದಲ್ಲಿ ಮರುಪರಿಶೀಲನೆಯ ಅಗತ್ಯವನ್ನು ಸೂಚಿಸುತ್ತಿದೆ ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಲ್‌ಡಿಎಫ್‌ನ ಸಾಂಪ್ರದಾಯಿಕ ಮತಬ್ಯಾಂಕ್ ದುರ್ಬಲಗೊಂಡಿರುವುದು ವರದಿಯಲ್ಲಿ ಉಲ್ಲೇಖವಾಗಿದ್ದು, ಕೆಲವು ಭದ್ರಕೋಟೆಗಳಲ್ಲೂ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ. ವಿಶೇಷವಾಗಿ ಹಲವು ಪ್ರದೇಶಗಳಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿರುವುದು ಪಕ್ಷಕ್ಕೆ ಕಳವಳದ ವಿಷಯವಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:

ರಾಜ್ಯ ರಾಜಕೀಯದಲ್ಲಿ ಬಿಜೆಪಿ ಕ್ರಮೇಣ ತನ್ನ ಮತಗಳ ಪಾಲನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಸಾಂಪ್ರದಾಯಿಕವಾಗಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವಿನ ಸ್ಪರ್ಧೆಯಲ್ಲಿದ್ದ ಕ್ಷೇತ್ರಗಳಲ್ಲೂ ತನ್ನ ನೆಲೆ ಬಲಪಡಿಸಲು ಪ್ರಯತ್ನಿಸುತ್ತಿದೆ ಎಂದು ಸಿಪಿಎಂ ವಿಶ್ಲೇಷಿಸಿದೆ. ಪಕ್ಷದ ಕೆಲವು ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ಸೆಳೆಯಲು ಬಿಜೆಪಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂಬ ಆತಂಕವನ್ನೂ ವರದಿ ವ್ಯಕ್ತಪಡಿಸಿದೆ.

ಬಿಜೆಪಿಯ ರಾಜಕೀಯ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಸಂಘಟನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಜನರೊಂದಿಗೆ ನೇರ ಸಂಪರ್ಕವನ್ನು ಹೆಚ್ಚಿಸಬೇಕಾಗಿದೆ ಎಂದು ಸಿಪಿಎಂ ರಾಜ್ಯ ಸಮಿತಿಯ ಚುನಾವಣಾ ಪರಿಶೀಲನಾ ವರದಿ ಒತ್ತಿ ಹೇಳಿದೆ. ಇದೇ ವೇಳೆ, ಎಲ್‌ಡಿಎಫ್‌ನ ಮತಗಳ ಕುಸಿತದ ಕಾರಣಗಳನ್ನು ಕ್ಷೇತ್ರಮಟ್ಟದಲ್ಲಿ ಅಧ್ಯಯನ ಮಾಡಿ, ಮುಂಬರುವ ಚುನಾವಣೆಗೆ ಹೊಸ ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವರದಿಯಲ್ಲಿ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !