June 14, 2026
Sunday, June 14, 2026
spot_img

ಸಂಗೀತ ಮಾಂತ್ರಿಕನಿಗೆ ಕಾನೂನು ಹಿನ್ನಡೆ: ಟ್ಯೂನ್ ಮೇಲಷ್ಟೇ ಹಕ್ಕಿದೆ ಎಂದ ದೆಹಲಿ ಹೈಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ದೃಢೀಕೃತ ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ದೊಡ್ಡ ಕಾನೂನು ಹಿನ್ನಡೆಯಾಗಿದೆ. ತಮ್ಮದೇ ಆದ ಮಾಸ್ಟರ್‌ಪೀಸ್ ಸಂಯೋಜನೆಗಳ ಕೃತಿಸ್ವಾಮ್ಯ ವಿಚಾರದಲ್ಲಿ ದಶಕಗಳಿಂದ ಕಟ್ಟುನಿಟ್ಟಿನ ಹೋರಾಟ ನಡೆಸುತ್ತಾ ಬಂದಿರುವ ಇಳಯರಾಜಾಗೆ, ಐಕಾನಿಕ್ ಸಾಂಗ್ ಒಂದರ ಸಂಪೂರ್ಣ ಮಾಲೀಕತ್ವ ಸಿಕ್ಕಿಲ್ಲ. 1981ರ ಸೂಪರ್ ಹಿಟ್ ತಮಿಳು ಸಿನಿಮಾ ‘ಮೂಡು ಪನಿ’ ಚಿತ್ರದ, ಕೆ.ಜೆ. ಯೇಸುದಾಸ್ ಧ್ವನಿಯಲ್ಲಿ ಮೂಡಿಬಂದಿದ್ದ ‘ಎನ್ ಇನಿಯ ಪೊನ್ ನಿಲವೆ’ ಹಾಡಿನ ಸಂಪೂರ್ಣ ಹಕ್ಕುಗಳು ಇಳಯರಾಜ ಅವರಿಗೆ ಸೇರಿದ್ದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕೋರ್ಟ್ ನೀಡಿದ ಮಹತ್ವದ ತೀರ್ಪಿನ ವಿವರ:

ನ್ಯಾಯಮೂರ್ತಿಗಳಾದ ಸಿ. ಹರಿ ಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ಪ್ರಕಾರ, “ಇಳಯರಾಜ ಅವರು ಕೇವಲ ಹಾಡಿನ ಟ್ಯೂನ್ ಅಥವಾ ಸಂಗೀತ ಸಂಯೋಜನೆಗೆ ಮಾತ್ರ ಮಾಲೀಕರಾಗಿದ್ದಾರೆ. ಆದರೆ, ಆ ಹಾಡಿನ ಸಾಹಿತ್ಯ ಮತ್ತು ಧ್ವನಿ ಮುದ್ರಣದ ಸಂಪೂರ್ಣ ಹಕ್ಕುಗಳು ಪ್ರಸಿದ್ಧ ಆಡಿಯೋ ಸಂಸ್ಥೆಯಾದ ‘ಸರೆಗಮ’ ಕಂಪನಿಗೆ ಸೇರುತ್ತವೆ” ಎಂದು ತಿಳಿಸಿದೆ.

ವೇಲ್ಸ್ ಫಿಲ್ಸ್ ಇಂಟರ್ನ್ಯಾಷನಲ್ ಸಂಸ್ಥೆಯು ತನ್ನ ಮುಂಬರುವ ಚಿತ್ರವೊಂದರಲ್ಲಿ ಈ ಕ್ಲಾಸಿಕ್ ಹಾಡನ್ನು ಮರುಬಳಕೆ ಮಾಡಲು ಇಳಯರಾಜ ಅವರಿಂದ ಅನುಮತಿ ಪಡೆದುಕೊಂಡಿತ್ತು. ಇದನ್ನು ಆಕ್ಷೇಪಿಸಿ ಸರೆಗಮ ಸಂಸ್ಥೆ ಕಾನೂನು ಹೋರಾಟ ನಡೆಸಿತ್ತು. ತಾವು 1980ರಲ್ಲೇ ಚಿತ್ರದ ಮೂಲ ನಿರ್ಮಾಪಕರಿಂದ ಅಧಿಕೃತವಾಗಿ ಈ ಹಾಡಿನ ಧ್ವನಿಮುದ್ರಣದ ಹಕ್ಕುಗಳನ್ನು ಖರೀದಿಸಿರುವುದಾಗಿ ಸರೆಗಮ ವಾದ ಮಂಡಿಸಿತ್ತು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಇಳಯರಾಜ ಅವರು ಸಾಹಿತ್ಯ ಮತ್ತು ಸೌಂಡ್ ರೆಕಾರ್ಡ್ ಹಕ್ಕುಗಳನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !