ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನೂ ಎಲ್ಲರಿಗೂ ಹೇಳಬೇಕೆಂದೇನಿಲ್ಲ. ಖುಷಿಯ ವಿಚಾರವಾಗಲಿ, ಕಷ್ಟವಾಗಲಿ, ಸಂಬಂಧಗಳ ವಿಚಾರವಾಗಲಿ ಅಥವಾ ಮುಂದಿನ ಯೋಜನೆಗಳಾಗಲಿ ಕೆಲವು ವಿಷಯಗಳನ್ನು ನಮ್ಮಲ್ಲೇ ಇಟ್ಟುಕೊಳ್ಳುವುದು ಕೆಲವೊಮ್ಮೆ ಜೀವನವನ್ನು ಇನ್ನಷ್ಟು ನೆಮ್ಮದಿಯಾಗಿಸುತ್ತದೆ. ಎಲ್ಲವನ್ನೂ ಹಂಚಿಕೊಳ್ಳುವುದಕ್ಕಿಂತ, ಎಲ್ಲಿ ಏನು ಹೇಳಬೇಕು ಎಂಬುದನ್ನು ತಿಳಿದುಕೊಳ್ಳುವುದೇ ಬೆಸ್ಟ್.
ಮನಸ್ಸಿಗೆ ಹೆಚ್ಚು ನೆಮ್ಮದಿ
ನಿಮ್ಮ ವೈಯಕ್ತಿಕ ವಿಚಾರಗಳನ್ನು ಪ್ರತಿಯೊಬ್ಬರೊಂದಿಗೂ ಹಂಚಿಕೊಳ್ಳದೇ ಇದ್ದಾಗ ಅನಗತ್ಯ ಸಲಹೆ, ಪ್ರಶ್ನೆ ಮತ್ತು ಅಭಿಪ್ರಾಯಗಳಿಂದ ದೂರವಿರಬಹುದು. ಇದರಿಂದ ಮನಸ್ಸಿನ ಮೇಲಿನ ಒತ್ತಡ ಕಡಿಮೆಯಾಗಿ, ನಿಮ್ಮ ನಿರ್ಧಾರಗಳನ್ನು ನೀವು ಶಾಂತವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಅನಗತ್ಯ ಹೋಲಿಕೆ ತಪ್ಪುತ್ತೆ
ನಿಮ್ಮ ಜೀವನದ ಪ್ರತಿಯೊಂದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಇತರರ ಜೀವನದೊಂದಿಗೆ ನಿಮ್ಮ ಜೀವನವನ್ನು ಹೋಲಿಸುವ ಅಥವಾ ಅವರು ನಿಮ್ಮನ್ನು ಹೋಲಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಖಾಸಗಿತನ ಕಾಪಾಡಿಕೊಂಡರೆ ಇಂತಹ ಅನಗತ್ಯ ಹೋಲಿಕೆಗಳಿಂದ ದೂರ ಇರಬಹುದು.
ಸಂಬಂಧಗಳಲ್ಲಿ ಗೊಂದಲ ಕಡಿಮೆಯಾಗುತ್ತೆ
ಕುಟುಂಬ ಅಥವಾ ವೈಯಕ್ತಿಕ ಸಂಬಂಧಗಳ ಪ್ರತಿಯೊಂದು ವಿಚಾರವನ್ನೂ ಹೊರಗಿನವರೊಂದಿಗೆ ಚರ್ಚಿಸುವುದರಿಂದ ಕೆಲವೊಮ್ಮೆ ಸಮಸ್ಯೆ ಮತ್ತಷ್ಟು ದೊಡ್ಡದಾಗಬಹುದು. ಸಂಬಂಧಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಅಗತ್ಯವಿರುವ ವ್ಯಕ್ತಿಗಳೊಂದಿಗೆ ಮಾತ್ರ ಹಂಚಿಕೊಳ್ಳುವುದು ಉತ್ತಮ.
ಇದನ್ನೂ ಓದಿ:
ನಿಮ್ಮ ಯೋಜನೆಗಳಿಗೆ ಒತ್ತಡ ಇರೋದಿಲ್ಲ
ಹೊಸ ಕೆಲಸ, ಬಿಸಿನೆಸ್, ಪ್ರವಾಸ, ವೈಯಕ್ತಿಕ ಗುರಿ ಅಥವಾ ಯಾವುದೇ ಹೊಸ ಯೋಜನೆಯ ಬಗ್ಗೆ ಮೊದಲೇ ಎಲ್ಲರಿಗೂ ಹೇಳಬೇಕೆಂದಿಲ್ಲ. ಫಲಿತಾಂಶ ಬರುವವರೆಗೂ ಕೆಲವೊಂದು ಯೋಜನೆಗಳನ್ನು ನಿಮ್ಮಲ್ಲೇ ಇಟ್ಟುಕೊಂಡರೆ ಹೊರಗಿನ ನಿರೀಕ್ಷೆ ಮತ್ತು ಒತ್ತಡ ಕಡಿಮೆಯಾಗುತ್ತದೆ.
ನಿಮ್ಮ ಮೇಲೆ ನಿಮ್ಮ ನಿಯಂತ್ರಣ ಹೆಚ್ಚುತ್ತೆ
ಎಲ್ಲರ ಅಭಿಪ್ರಾಯ ಕೇಳಿ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ಬದಲು, ಯಾವ ವಿಚಾರವನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂಬ ಗಡಿ ನಿಮಗೆ ಗೊತ್ತಾಗುತ್ತದೆ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ, ನಿಮ್ಮ ಜೀವನದ ಮೇಲೆ ನಿಮಗಿರುವ ನಿಯಂತ್ರಣವನ್ನೂ ಬಲಪಡಿಸುತ್ತದೆ.
ಪ್ರೈವೆಸಿ ಅಂದ್ರೆ ಎಲ್ಲರಿಂದ ದೂರವಾಗಿ ಇದ್ದುಬಿಡೋದು ಎಂದಲ್ಲ. ನಿಮ್ಮ ಜೀವನದಲ್ಲಿ ಯಾರಿಗೆ ಎಷ್ಟು ಮಾಹಿತಿ ನೀಡಬೇಕು ಎಂಬುದನ್ನು ತಿಳಿದುಕೊಳ್ಳೋದು. ಪ್ರತಿಯೊಂದು ಖುಷಿಯನ್ನೂ, ಪ್ರತಿಯೊಂದು ಸಮಸ್ಯೆಯನ್ನೂ ಮತ್ತು ಪ್ರತಿಯೊಂದು ಯೋಜನೆಯನ್ನೂ ಜಗತ್ತಿಗೆ ತೋರಿಸುವ ಅಗತ್ಯವಿಲ್ಲ. ಕೆಲವೊಂದು ವಿಷಯಗಳು ನಿಮ್ಮ ಹೃದಯದಲ್ಲೇ ಉಳಿದಾಗಲೇ ಜೀವನ ಇನ್ನಷ್ಟು ಸರಳ, ಶಾಂತ ಮತ್ತು ಸಂತೋಷವಾಗಿರಬಹುದು ಅಲ್ವಾ?



