ಕೆಲವೊಮ್ಮೆ ಜೀವನದಲ್ಲಿ ಒಂದು ವಿಚಿತ್ರ ಅರಿವು ಬರುತ್ತದೆ. ನಾವು ಕಂಡ ಕನಸುಗಳು ಒಂದೇ ರೀತಿ ಇರತ್ತವೆ… ಆದರೆ ನಮ್ಮ ಮುಂದೆ ಬಂದಿರುವ ವಾಸ್ತವತೆ ಬೇರೆ ರೀತಿ ಇರತ್ತೆ. ಆಗ ಮನಸ್ಸು ಕೇಳುತ್ತದೆ “ನಾನು ಬಯಸಿದ ಜೀವನ ಇದಲ್ಲ ಅಲ್ವಾ?”
ಈ ಪ್ರಶ್ನೆ ಸುಲಭ ಅಲ್ಲ. ಯಾಕೆಂದರೆ ನಾವು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ “ಇದನ್ನೇ ಬೇಕು” ಅನ್ನೋ ನಿರೀಕ್ಷೆಗಳೊಂದಿಗೆ ಬದುಕನ್ನು ಕಟ್ಟಿಕೊಂಡಿರುತ್ತೇವೆ. ಆದರೆ ಜೀವನ ಯಾವಾಗಲೂ ನಮ್ಮ ನಿರೀಕ್ಷೆಗಳ ಪ್ರಕಾರ ನಡೆಯೋದಿಲ್ಲ.
ಆದರೆ ಇಲ್ಲಿ ಒಂದು ಸಣ್ಣ ತಿರುವು ಇದೆ. ಜೀವನ ನಮ್ಮ ಬಯಕೆಯಂತೆ ಬರದಿದ್ದರೂ, ಅದರಲ್ಲಿ ನಮಗೆ ಬದುಕಲು ಒಂದು ದಾರಿ ಇರುತ್ತದೆ. ನಾವು ಗಮನಿಸದ ಸಣ್ಣ ಸಂತೋಷಗಳು, ಮರೆತುಹೋದ ಕ್ಷಣಗಳು, ಮತ್ತು ಪ್ರತಿದಿನದ ಸರಳ ಅನುಭವಗಳು ನಿಧಾನವಾಗಿ ನಮ್ಮ ಜೊತೆ ಮಾತನಾಡುತ್ತಿರುತ್ತವೆ.
ಇದನ್ನೂ ಓದಿ:
ಸಿಕ್ಕ ಜೀವನವನ್ನು ಪ್ರೀತಿಸುವುದು ಅಂದ್ರೆ “ಕನಸುಗಳನ್ನು ಬಿಟ್ಟುಬಿಡುವುದು” ಅಲ್ಲ. ಅದು ಇವತ್ತಿನ ವಾಸ್ತವತೆಯಲ್ಲಿ ಕೂಡ ಒಂದಷ್ಟು ಅರ್ಥ ಹುಡುಕುವುದು. ದೊಡ್ಡದನ್ನು ಕಾಯುವ ನಡುವೆ, ಈಗಿರುವದನ್ನು ಸಂಪೂರ್ಣವಾಗಿ ಅನುಭವಿಸುವುದು.
ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂಬ ಒತ್ತಡ ಕಡಿಮೆಯಾದಾಗ, ಜೀವನ ಸ್ವಲ್ಪ ಹಗುರವಾಗುತ್ತದೆ. ಆಗ ನಮಗೆ ಅರ್ಥವಾಗುತ್ತದೆ ಜೀವನ ಯಾವಾಗಲೂ ನಾವು ಬಯಸಿದ ಹಾಗೆ ಇರದಿದ್ದರೂ, ಅದು ಬದುಕಲು ಒಂದು ಅವಕಾಶ ಕೊಡುತ್ತದೆ.
ಕೊನೆಯಲ್ಲಿ ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ…ನಾವು ಇಲ್ಲಿಯವರೆಗೆ ಕಳೆದುಕೊಂಡದ್ದನ್ನೇ ನೋಡ್ತಾ ಇರಬೇಕಾ…
ಇಲ್ಲಾ ಈಗ ನಮ್ಮ ಕೈಯಲ್ಲಿರುವ ಜೀವನವನ್ನೇ ಸ್ವಲ್ಪ ಹೆಚ್ಚು ಜೀವಿಸಬೇಕಾ?



