May 15, 2026
Friday, May 15, 2026
spot_img

ವಿಜಯ್ ಹಾದಿಗೆ ಅಡ್ಡಗಾಲಾದ ‘ಮ್ಯಾಜಿಕ್ ನಂಬರ್’: ರಾಜ್ಯಪಾಲರ ಕಠಿಣ ನಿಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ, ಮ್ಯಾಜಿಕ್ ನಂಬರ್ 118 ತಲುಪಲು ಹೆಣಗಾಡುತ್ತಿದೆ. ಗುರುವಾರ ಬೆಳಿಗ್ಗೆ ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್ ಅವರಿಗೆ ಸ್ಪಷ್ಟ ಸೂಚನೆ ಲಭ್ಯವಾಗಿದೆ. “ಕೇವಲ ಬಾಯಿಮಾತಿನ ಭರವಸೆ ಸಾಲದು, ನಿಮ್ಮ ಬಳಿ 118 ಶಾಸಕರ ಬೆಂಬಲವಿದೆ ಎಂಬುದಕ್ಕೆ ಭೌತಿಕವಾಗಿ ಸಹಿ ಮಾಡಿದ ಬೆಂಬಲ ಪತ್ರಗಳನ್ನು ತಂದುಕೊಡಿ” ಎಂದು ರಾಜ್ಯಪಾಲರು ಪಟ್ಟು ಹಿಡಿದಿದ್ದಾರೆ.

ಪ್ರಸ್ತುತ ವಿಜಯ್ ಅವರ ಕೈಯಲ್ಲಿರುವುದು ಕೇವಲ 113 ಶಾಸಕರ ಬಲ.

ಟಿವಿಕೆ: 108 ಶಾಸಕರು

ಕಾಂಗ್ರೆಸ್: 05 ಶಾಸಕರು

ಒಟ್ಟು: 113

ಆದರೆ, ಬಹುಮತಕ್ಕೆ ಇನ್ನೂ 5 ಶಾಸಕರ ಕೊರತೆಯಿದೆ. ಈ ಬಗ್ಗೆ ಉತ್ತರಿಸಿರುವ ವಿಜಯ್, “ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಪಿಎಂಕೆ ಪಕ್ಷಗಳ ಬೆಂಬಲದೊಂದಿಗೆ ನಮ್ಮ ಸಂಖ್ಯಾಬಲ 123ಕ್ಕೆ ಏರಲಿದೆ, ನಾನು ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯ್ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಒಂದು ಪ್ರಮುಖ ಷರತ್ತು ವಿಧಿಸಿದೆ. “ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಜೊತೆ ಟಿವಿಕೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು” ಎಂಬುದು ಕಾಂಗ್ರೆಸ್‌ನ ಕಟ್ಟುನಿಟ್ಟಿನ ಆದೇಶ. ಇದರಿಂದಾಗಿ ವಿಸಿಕೆ (VCK) ಮತ್ತು ಪಿಎಂಕೆ (PMK) ಪಕ್ಷಗಳನ್ನು ಸೆಳೆಯುವುದು ವಿಜಯ್‌ಗೆ ಕಷ್ಟವಾಗುತ್ತಿದೆ. ಏಕೆಂದರೆ ವಿಸಿಕೆ ಸದ್ಯ ಡಿಎಂಕೆ ಜೊತೆಗಿದ್ದರೆ, ಪಿಎಂಕೆ ಬಿಜೆಪಿಯ ಮಿತ್ರಪಕ್ಷವಾಗಿದೆ. ಇವರು ವಿಜಯ್ ಕೈ ಹಿಡಿಯಬೇಕೆಂದರೆ ತಮ್ಮ ಹಾಲಿ ಮೈತ್ರಿಕೂಟವನ್ನು ತೊರೆಯಬೇಕಾದ ಅನಿವಾರ್ಯತೆ ಇದೆ.

ಇನ್ನೊಂದೆಡೆ, ಎಐಎಡಿಎಂಕೆಯ ಸುಮಾರು 12 ಶಾಸಕರು ವಿಜಯ್ ಅವರಿಗೆ ಬೆಂಬಲ ನೀಡಲು ಸಿದ್ಧರಿದ್ದು, ಈಗಾಗಲೇ ಪುದುಚೇರಿಯ ರೆಸಾರ್ಟ್ ಸೇರಿದ್ದಾರೆ ಎಂಬ ವದಂತಿಗಳು ಹರಡಿವೆ. ಆದರೆ ಪಕ್ಷದ ನಾಯಕರಾದ ಇಪಿಎಸ್ ಅವರು ಈ ಮೈತ್ರಿಯನ್ನು ಸ್ಪಷ್ಟವಾಗಿ ನಿರಾಕರಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !