June 24, 2026
Wednesday, June 24, 2026
spot_img

ಮಾವು ಬೆಲೆ ಪಾತಾಳಕ್ಕೆ: ಬೆಂಬಲ ಬೆಲೆಗೆ ಆಗ್ರಹಿಸಿ ಕೋಲಾರ ಬಂದ್, ರಸ್ತೆಗೆ ಟನ್ ಗಟ್ಟಲೆ ಮಾವು ಸುರಿದು ರೈತರ ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದ ಪ್ರಮುಖ ಮಾವು ಬೆಳೆಯುವ ಜಿಲ್ಲೆಯಾದ ಕೋಲಾರದಲ್ಲಿ ರೈತರ ಕಣ್ಣೀರು ಮುಗಿಲು ಮುಟ್ಟಿದೆ. ಸತತ ಎರಡನೇ ವರ್ಷವೂ ಮಾವಿನ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಕಂಗಾಲಾಗಿರುವ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಇಂದು  ‘ಕೋಲಾರ ಜಿಲ್ಲಾ ಬಂದ್’ ಆಚರಿಸುತ್ತಿವೆ. ಜಿಲ್ಲೆಯ ಶ್ರೀನಿವಾಸಪುರ ಮತ್ತು ಚಿಂತಾಮಣಿ ಭಾಗಗಳಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಕೆ.ಜಿ ಮಾವಿಗೆ ಕೇವಲ 3 ರಿಂದ 5 ರೂಪಾಯಿ!

ಪ್ರಸ್ತುತ ಮಾರುಕಟ್ಟೆಯಲ್ಲಿ ಅದರಲ್ಲೂ ಮುಖ್ಯವಾಗಿ ತೋತಾಪುರಿ ಮತ್ತು ಸಿಂಧೂರ ತಳಿಯ ಮಾವಿನ ಹಣ್ಣುಗಳ ಸಗಟು ದರ ತೀವ್ರ ಕುಸಿತ ಕಂಡಿದೆ. ಒಂದು ಕೆ.ಜಿ ಮಾವಿಗೆ ಕೇವಲ 3 ರಿಂದ 5 ಮಾತ್ರ ಸಿಗುತ್ತಿದ್ದು, ಒಂದು ಟನ್ ಮಾವು ಕೇವಲ 3,000 ದಿಂದ 4,000 ಕ್ಕೆ ಮಾರಾಟವಾಗುತ್ತಿದೆ. ಇದರಿಂದಾಗಿ ರೈತರಿಗೆ ತಾವು ಮಾಡಿದ ಹೂಡಿಕೆ, ಕೀಟನಾಶಕ ಹಾಗೂ ಕಟಾವು ಮಾಡಲು ತಗುಲಿದ ಕೂಲಿ ವೆಚ್ಚವೂ ಕೈಗೆ ಸಿಗುತ್ತಿಲ್ಲ. ಈ ಆರ್ಥಿಕ ಸಂಕಷ್ಟದಿಂದ ರೊಚ್ಚಿಗೆದ್ದ ರೈತರು ಕಟಾವು ಮಾಡಿದ ಟನ್ ಗಟ್ಟಲೆ ಮಾವಿನ ಹಣ್ಣುಗಳನ್ನು ರಸ್ತೆ ಹಾಗೂ ಹೆದ್ದಾರಿಗಳ ಮೇಲೆ ಸುರಿದು ವಿನೂತನವಾಗಿ ಪ್ರತಿಭಟಿಸಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳು:

ಮಾರುಕಟ್ಟೆಯಲ್ಲಿ ತೀವ್ರ ನಷ್ಟ ಅನುಭವಿಸುತ್ತಿರುವ ರೈತರನ್ನು ರಕ್ಷಿಸಲು ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪ್ರತಿ ಟನ್ ಮಾವಿಗೆ ಕನಿಷ್ಠ 8,000 ದಿಂದ 10,000 ಬೆಂಬಲ ಬೆಲೆ ಘೋಷಿಸಬೇಕು. ನೆರೆಯ ಆಂಧ್ರಪ್ರದೇಶ ಸರ್ಕಾರವು ಅಲ್ಲಿನ ಮಾವು ಬೆಳೆಗಾರರ ನೆರವಿಗೆ ಧಾವಿಸಿ ಸಹಾಯಧನ ನೀಡುತ್ತಿರುವ ಮಾದರಿಯಲ್ಲೇ ಕರ್ನಾಟಕ ಸರ್ಕಾರವೂ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು. ಕಾರ್ಖಾನೆ ಮಾಲೀಕರು ಹಾಗೂ ಮಧ್ಯವರ್ತಿಗಳು ಒಟ್ಟಾಗಿ ಮಾವಿನ ದರವನ್ನು ಕೃತಕವಾಗಿ ಕುಸಿಯುವಂತೆ ಮಾಡುತ್ತಿದ್ದಾರೆ. ಇದನ್ನು ಜಿಲ್ಲಾಡಳಿತ ನಿಯಂತ್ರಿಸಬೇಕು ಎಂದು ಆಗ್ರಿಹಿಸಿದ್ದಾರೆ.

ಇದನ್ನೂ ಓದಿ:

ಸಾರಿಗೆ ಸಂಪರ್ಕ ಬಂದ್, ಹೆದ್ದಾರಿ ತಡೆ:

ಬಂದ್ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾದ್ಯಂತ ಕೆಎಸ್‌ಆರ್‌ಟಿಸಿ (KSRTC) ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಶ್ರೀನಿವಾಸಪುರ ಪಟ್ಟಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಜನಜೀವನ ಹದಗೆಟ್ಟಿದೆ. ರಸ್ತೆಗಳಿಗೆ ಟೈರ್ ಹಚ್ಚಿ ಹಾಗೂ ವಾಹನಗಳನ್ನು ತಡೆದು ರೈತರು ಹೆದ್ದಾರಿ ತಡೆ ನಡೆಸುತ್ತಿರುವುದರಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಂಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !