ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲ್ಜಿಯಂನ ಆಂಟ್ವೆರ್ಪ್ ನಗರದ ಲಿಂಕರೋವರ್ ಪ್ರದೇಶದಲ್ಲಿರುವ 10 ಅಂತಸ್ತಿನ ವಸತಿ ಸಮುಚ್ಚಯದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಅಪಾರ್ಟ್‌ಮೆಂಟ್‌ನ 8ನೇ ಮಹಡಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ, ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಘಟನೆಯಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವ ಆತಂಕ ಎದುರಾಗಿದೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ
ಸುಮಾರು 200ಕ್ಕೂ ಹೆಚ್ಚು ನಿವಾಸಿಗಳಿದ್ದ ಈ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಆರಂಭಿಸಿದರು. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ, ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜನರನ್ನು ರಕ್ಷಿಸಲು ವಿಶೇಷ ಡ್ರೋನ್ ತಂಡಗಳ ಸಹಾಯವನ್ನು ಪಡೆಯಲಾಯಿತು.
ಸ್ಥಳೀಯರಿಗೆ ಹೈ ಅಲರ್ಟ್ ಘೋಷಣೆ
ಕಟ್ಟಡದಿಂದ ಹೊರಹೊಮ್ಮುತ್ತಿರುವ ದಟ್ಟವಾದ ಹೊಗೆ ಇಡೀ ಪ್ರದೇಶವನ್ನು ಆವರಿಸಿಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ನಿವಾಸಿಗಳು ತಮ್ಮ ಮನೆಗಳ ಕಿಟಕಿ-ಬಾಗಿಲುಗಳನ್ನು ಮುಚ್ಚಿಕೊಳ್ಳಬೇಕು ಮತ್ತು ವೆಂಟಿಲೇಷನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಸ್ತುತ ದುರಂತದಲ್ಲಿ ಆಗಿರುವ ಸಾವು-ನೋವುಗಳ ನಿಖರ ಸಂಖ್ಯೆ ಹಾಗೂ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂಬುದು ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ.



