August 21, 2026
Friday, August 21, 2026
spot_img

ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್: ಆನ್‌ಲೈನ್ ಫಾರ್ಮಸಿ ವಿರುದ್ಧ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ಸ್‌ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆನ್‌ಲೈನ್ ಆಪ್‌ಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಔಷಧಿಗಳ ಮೇಲೆ ನೀಡುತ್ತಿರುವ ಭಾರಿ ರಿಯಾಯಿತಿ ಹಾಗೂ ನಿಯಂತ್ರಣವಿಲ್ಲದ ಆನ್‌ಲೈನ್ ಮಾರಾಟವನ್ನು ವಿರೋಧಿಸಿ ಇಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (AIOCD) ದೇಶಾದ್ಯಂತ ಮೆಡಿಕಲ್ ಶಾಪ್‌ಗಳ ಬಂದ್‌ಗೆ ಕರೆ ನೀಡಿದೆ.

ದೇಶಾದ್ಯಂತ ಸುಮಾರು 12.4 ಲಕ್ಷಕ್ಕೂ ಹೆಚ್ಚು ಹಾಗೂ ಕರ್ನಾಟಕದ 26,000 ಕ್ಕೂ ಹೆಚ್ಚು ಖಾಸಗಿ ಮೆಡಿಕಲ್ ಶಾಪ್‌ಗಳು ಈ ಮುಷ್ಕರದಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು, ಇಂದು ರಾತ್ರಿ 11:59 ರವರೆಗೆ ಈ ಬಂದ್ ಮುಂದುವರಿಯಲಿದೆ.

ಸ್ವಿಗ್ಗಿ, ಬ್ಲಿಂಕಿಟ್, ಜೊಮಾಟೊ ಸೇರಿದಂತೆ ವಿವಿಧ ಆಪ್‌ಗಳು ಮತ್ತು ಕಾರ್ಪೊರೇಟ್ ಕಂಪನಿಗಳು ಶೇ. 20 ರಿಂದ 60 ರಷ್ಟು ಭಾರಿ ರಿಯಾಯಿತಿ ನೀಡಿ ಆನ್‌ಲೈನ್‌ನಲ್ಲಿ ಔಷಧಿ ಮಾರುತ್ತಿರುವುದರಿಂದ ಸ್ಥಳೀಯ ಸಣ್ಣ ಮೆಡಿಕಲ್ ಮಾಲೀಕರ ವ್ಯವಹಾರಕ್ಕೆ ಭಾರಿ ಹೊಡೆತ ಬಿದ್ದಿದೆ.

ರಾಜ್ಯದಲ್ಲಿ ಈ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಫಾರ್ಮಾ ಫೋರಂ ಮತ್ತು ಶಿವಮೊಗ್ಗದಂತಹ ಕೆಲವು ಜಿಲ್ಲಾ ಸಂಘಟನೆಗಳು ಸಂಪೂರ್ಣ ಬಂದ್‌ಗೆ ಬೆಂಬಲ ನೀಡಿವೆ. ಆದರೆ, ‘ಕರ್ನಾಟಕ ಫಾರ್ಮಾ ರೀಟೈಲರ್ಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ (KPRDO)’ ಮಳಿಗೆಗಳನ್ನು ಮುಚ್ಚಿ, ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸುವ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಿದೆ.

ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ತೊಂದರೆಯಾಗದಂತೆ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಹೊಂದಿಕೊಂಡಿರುವ ಮೆಡಿಕಲ್ ಸ್ಟೋರ್‌ಗಳು, ಜನೌಷಧಿ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಯ ಫಾರ್ಮಸಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !