June 29, 2026
Monday, June 29, 2026
spot_img

ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಯಶಸ್ಸು: ಮೃತ ದಾನಿಯ ಅಂಗಾಂಗದಿಂದ ರೋಗಿಗಳಿಗೆ ಹೊಸ ಬದುಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತ್ಯಂತ ದುಃಖದ ಸನ್ನಿವೇಶದಲ್ಲೂ ಮಾನವೀಯತೆ ಮೆರೆದ ಕುಟುಂಬವೊಂದು ತೆಗೆದುಕೊಂಡ ನಿರ್ಧಾರವು, ಹಲವು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣವಾಗಿದೆ. ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ (Brain Dead) 40 ವರ್ಷದ ಅನಂತ್ ಕುಮಾರ್ ಆರ್. ಅವರ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿಸಿದ ಹಿನ್ನೆಲೆಯಲ್ಲಿ, ಅನೇಕ ಮಂದಿಗೆ ಮರುಜೀವ ದೊರೆತಿದೆ.

ಡೆಲಿವರಿ ರೈಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಂತ್ ಕುಮಾರ್, ಇಬ್ಬರು ಮಕ್ಕಳ ತಂದೆಯಾಗಿದ್ದರು. ಅಪಘಾತದ ನಂತರ ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ, ಸರ್ಜಾಪುರ ರಸ್ತೆಗೆ ದಾಖಲಿಸಲಾಗಿತ್ತು. ವೈದ್ಯರು ನಿರಂತರ ಪ್ರಯತ್ನ ಪಟ್ಟರೂ, ಮೆದುಳಿಗೆ ಉಂಟಾಗಿದ್ದ ತೀವ್ರ ಗಾಯಗಳಿಂದಾಗಿ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ತದನಂತರ ಅವರನ್ನು ವೈದ್ಯಕೀಯವಾಗಿ ‘ಬ್ರೈನ್ ಡೆಡ್’ ಎಂದು ಘೋಷಿಸಲಾಯಿತು. ಈ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆಯ ಅಂಗಾಂಗ ದಾನ ಸಮಾಲೋಚಕರು ಕುಟುಂಬದೊಂದಿಗೆ ನಡೆಸಿದ ಸಮಾಲೋಚನೆಯ ಬಳಿಕ, ಅಪಾರ ದುಃಖದಲ್ಲಿದ್ದರೂ ಕುಟುಂಬವು ಅಂಗಾಂಗ ದಾನಕ್ಕೆ ಅಚಲ ನಿರ್ಧಾರ ಕೈಗೊಳ್ಳುವ ಮೂಲಕ ಉನ್ನತ ಮಾನವೀಯತೆ ಪ್ರದರ್ಶಿಸಿತು.

ಕುಟುಂಬದ ಈ ನಿರ್ಧಾರದಿಂದ ದಾನಿಯ ಹಾರ್ಟ್, ಲಿವರ್ , ಕಿಡ್ನಿ ಮತ್ತು ಕಣ್ಣಿನ ಕಾರ್ನಿಯಸ್ ಗಳನ್ನು ಮೃತ ದಾನಿಗಳ ಅಂಗಾಂಗ ದಾನ ಕಾರ್ಯಕ್ರಮದಡಿ, ಕಸಿಗಾಗಿ ಕಾಯುತ್ತಿದ್ದ ವಿವಿಧ ರೋಗಿಗಳಿಗೆ ಹಂಚಿಕೆ ಮಾಡಲಾಯಿತು. ಇದರಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಅಂತಿಮ ಹಂತದ ಮೂತ್ರಪಿಂಡ ವೈಫಲ್ಯದಿಂದ (End-Stage Kidney Disease) ಬಳಲುತ್ತಿದ್ದ ರೋಗಿಯೂ ಸೇರಿದ್ದಾರೆ. ರೋಗಿಯು ಕಸಿ ಪೂರ್ವದ ಎಲ್ಲಾ ವೈದ್ಯಕೀಯ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿದ್ದರಿಂದ, ಅಂಗಾಂಗ ಲಭ್ಯವಾದ ತಕ್ಷಣವೇ ವೈದ್ಯಕೀಯ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿತು. ಕಸಿ ಮಾಡಿದ ಮೂತ್ರಪಿಂಡವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೋಗಿಯ ಆರೋಗ್ಯ ಸ್ಥಿರವಾಗಿದೆ.

ಇದನ್ನೂ ಓದಿ:

ಈ ಕುರಿತು ಮಾತನಾಡಿದ ಮಣಿಪಾಲ್ ಆಸ್ಪತ್ರೆ, ಸರ್ಜಾಪುರ ರಸ್ತೆಯ ಮೂತ್ರಪಿಂಡ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮನೋಹರ್ ಭದ್ರಪ್ಪ ಅವರು, “ಮೃತ ದಾನಿಯ ಅಂಗಾಂಗ ಕಸಿ ಪ್ರಕ್ರಿಯೆ ಯಶಸ್ವಿಯಾಗಲು ದಾನಿಯ ಕುಟುಂಬ ಮತ್ತು ವೈದ್ಯಕೀಯ ತಂಡದ ಸಮನ್ವಯ ಅತ್ಯಗತ್ಯ. ಕುಟುಂಬದ ಸಮಯೋಚಿತ ನಿರ್ಧಾರ ಮತ್ತು ರೋಗಿಯ ಸಿದ್ಧತೆಯು ಈ ಕಸಿಯನ್ನು ಯಶಸ್ವಿಗೊಳಿಸಿತು,” ಎಂದರು.

ನೆಫ್ರಾಲಜಿ ವಿಭಾಗದ ಸಲಹೆಗಾರರಾದ ಡಾ. ಮಿತೇಶ್ ಮಕ್ವಾನಾ ಮಾತನಾಡಿ, “ಅಂತಿಮ ಹಂತದ ಮೂತ್ರಪಿಂಡ ವೈಫಲ್ಯಕ್ಕೆ ಕಿಡ್ನಿ ಕಸಿ ಅತ್ಯುತ್ತಮ ದೀರ್ಘಕಾಲಿಕ ಪರಿಹಾರವಾಗಿದೆ. ರೋಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ದಾನಿಗಳ ಕುಟುಂಬದ ಈ ಉದಾತ್ತ ನಿರ್ಧಾರವು ಕೇವಲ ಒಂದು ಜೀವವನ್ನು ಉಳಿಸಿಲ್ಲ, ಬದಲಾಗಿ ಅನೇಕ ಕುಟುಂಬಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ,” ಎಂದು ತಿಳಿಸಿದರು.

ಭಾರತದಲ್ಲಿ ಸಾವಿರಾರು ರೋಗಿಗಳು ಅಂಗಾಂಗ ಕಸಿಗಾಗಿ ಕಾಯುತ್ತಿದ್ದರೂ, ಮೃತ ದಾನಿಗಳಿಂದ ಅಂಗಾಂಗ ಪಡೆಯುವ ಪ್ರಮಾಣ ಇನ್ನೂ ಕಡಿಮೆಯಿದೆ. ಒಬ್ಬ ಮೃತ ದಾನಿಯು ಹಲವಾರು ಜೀವಗಳನ್ನು ಉಳಿಸಬಲ್ಲರು ಅಥವಾ ಬದುಕಿನ ಗುಣಮಟ್ಟವನ್ನು ಸುಧಾರಿಸಬಲ್ಲರು. ಈ ನಿಟ್ಟಿನಲ್ಲಿ ಅಂಗಾಂಗ ದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಅನಂತ್ ಕುಮಾರ್ ಅವರ ಕುಟುಂಬ ಅನುಭವಿಸಿದ ನಷ್ಟವನ್ನು ಯಾವುದೂ ತುಂಬಲಾರದು, ಆದರೆ ಅವರ ಈ ಉದಾತ್ತ ನಿರ್ಧಾರದಿಂದ ಅವರು ಇಂದು ಹಲವರ ಬದುಕಿನಲ್ಲಿ ಜೀವಂತವಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !