July 2, 2026
Thursday, July 2, 2026
spot_img

ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮೆಹಬೂಬಾ ಮುಫ್ತಿ: ಭಾರತದಿಂದಲೂ ಉನ್ನತ ಮಟ್ಟದ ನಿಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನ ಮಾಜಿ ಪರಮೋಚ್ಛ ನಾಯಕ ಅಲಿ ಖಮೇನಿ ಅವರ ರಾಜ್ಯಮಟ್ಟದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಟೆಹರಾನ್‌ಗೆ ತೆರಳಲಿದ್ದಾರೆ ಎಂದು ಪೀಪಲ್ಸ್‌ ಡೆಮಾಕ್ರೆಟಿಕ್ ಪಕ್ಷದ (ಪಿಡಿಪಿ) ಪಕ್ಷದ ಮೂಲಗಳು ತಿಳಿಸಿವೆ. ಇರಾನ್ ಸರ್ಕಾರದ ಅಧಿಕೃತ ಆಹ್ವಾನವನ್ನು ಅವರು ಸ್ವೀಕರಿಸಿದ್ದು, ವಿಶೇಷ ವಿಮಾನದ ಮೂಲಕ ಪ್ರಯಾಣಿಸಲಿದ್ದಾರೆ.

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಖಮೇನಿ ಮೃತಪಟ್ಟ ಬಳಿಕ ಮುಫ್ತಿ ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದರು. ಇದೀಗ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಇರಾನ್‌ಗೆ ತೆರಳುತ್ತಿರುವ ಪ್ರಮುಖ ಭಾರತೀಯ ರಾಜಕೀಯ ನಾಯಕರಲ್ಲಿ ಅವರು ಒಬ್ಬರಾಗಿದ್ದಾರೆ. ಮುಫ್ತಿ ಅವರಲ್ಲದೆ, ಜಮ್ಮು-ಕಾಶ್ಮೀರದ ಹಲವು ರಾಜಕೀಯ ಹಾಗೂ ಧಾರ್ಮಿಕ ಮುಖಂಡರಿಗೂ ಆಹ್ವಾನ ನೀಡಲಾಗಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಿಗೂ ಆಹ್ವಾನ ರವಾನಿಸಲಾಗಿದೆ. ಭಾರತ ಸರ್ಕಾರದ ಪರವಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪವಿತ್ರಾ ಮಾರ್ಗರಿಟಾ ಹಾಗೂ ಬಿಹಾರ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಇರಾನ್ ಸರ್ಕಾರದ ವೇಳಾಪಟ್ಟಿಯಂತೆ ರಾಜ್ಯಮಟ್ಟದ ಅಂತ್ಯಕ್ರಿಯೆಯ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು, ಜುಲೈ 9ರಂದು ಮಶ್ಹದ್‌ನಲ್ಲಿ ಅಂತಿಮ ಸಮಾಧಿ ವಿಧಿ ನೆರವೇರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !