July 23, 2026
Thursday, July 23, 2026
spot_img

ಎತ್ತಿನಹೊಳೆ ಯೋಜನೆಗೆ ಜೆಜೆಎಂ ಅಡಿ 4,708 ಕೋಟಿ ನೀಡಿ: ಕೇಂದ್ರಕ್ಕೆ ಸಚಿವ ಈಶ್ವರ ಖಂಡ್ರೆ ಮನವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಕರ್ನಾಟಕದ ಏಳು ಬರಪೀಡಿತ ಜಿಲ್ಲೆಗಳ ಕುಡಿಯುವ ನೀರಿನ ಆಶಾಕಿರಣವಾಗಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಉಳಿಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ತನ್ನ ಪಾಲಿನ 4,708.14 ಕೋಟಿ ರೂ. ಅನುದಾನವನ್ನು ಜಲ ಜೀವನ್ ಮಿಷನ್ (JJM) ಯೋಜನೆಯಡಿ ಭರಿಸಬೇಕು ಎಂದು ರಾಜ್ಯ ಸರ್ಕಾರ  ಮನವಿ ಮಾಡಿದೆ.

ದೆಹಲಿಯ ಅಧಿಕೃತ ಪ್ರವಾಸದಲ್ಲಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಮಂಗಳವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹಾಗೂ ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಈ ಕುರಿತು ಮಹತ್ವದ ಮನವಿ ಪತ್ರ ಸಲ್ಲಿಸಿದರು.

ಒಟ್ಟು 9,416 ಕೋಟಿ ವೆಚ್ಚದ ಕಾಮಗಾರಿ ಬಾಕಿ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, “ಎತ್ತಿನಹೊಳೆ ಯೋಜನೆಯ ಬಹುತೇಕ ಪ್ರಮುಖ ಕಾಮಗಾರಿಗಳನ್ನು ಈಗಾಗಲೇ ಕರ್ನಾಟಕ ಸರ್ಕಾರ ತನ್ನ ಸ್ವಂತ ಹಣದಿಂದಲೇ ಪೂರ್ಣಗೊಳಿಸಿದೆ. ಆದರೆ, ಈ ಬೃಹತ್ ಯೋಜನೆ ಸಂಪೂರ್ಣವಾಗಿ ಮುಕ್ತಾಯಗೊಳ್ಳಲು ಇನ್ನು ಸುಮಾರು 9,416.28 ಕೋಟಿ ರೂ. ವೆಚ್ಚದ ಉಳಿಕೆ ಕಾಮಗಾರಿಗಳು ಬಾಕಿ ಇವೆ. ಕೇಂದ್ರ ಸರ್ಕಾರವು ಜಲ ಜೀವನ್ ಮಿಷನ್ ನಿಯಮಾವಳಿಗಳ ಅನ್ವಯ ಶೇಕಡಾ 50 ರಷ್ಟು ಪಾಲನ್ನು ಭರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:

75ಲಕ್ಷ ಜನರಿಗೆ ಸುಸ್ಥಿರ ಕುಡಿಯುವ ನೀರು

ಪಶ್ಚಿಮ ಘಟ್ಟಗಳ ಮೇಲ್ಭಾಗದಿಂದ ಹರಿಯುವ 24.01 ಟಿಎಂಸಿ ನೀರನ್ನು ಎತ್ತುವಳಿ ಮಾಡುವ ಈ ಯೋಜನೆಯಲ್ಲಿ, 14.056 ಟಿಎಂಸಿ ನೀರನ್ನು ಸಂಪೂರ್ಣವಾಗಿ ಕುಡಿಯುವ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಈ ಯೋಜನೆಯಿಂದ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ  ಜಿಲ್ಲೆಗಳಲ್ಲಿ ಒಟ್ಟು 6,657 ಹಳ್ಳಿಗಳು ಮತ್ತು 38 ಪಟ್ಟಣಗಳ ಸುಮಾರು 75.59 ಲಕ್ಷ ಜನರಿಗೆ ಸುರಕ್ಷಿತ ಹಾಗೂ ಸುಸ್ಥಿರ ಕುಡಿಯುವ ನೀರು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೇಂದ್ರ ಸರ್ಕಾರವೂ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.  

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !