October 16, 2026
Friday, October 16, 2026
spot_img

ದೇಶದಲ್ಲಿ ಇಂಧನ ಬಿಕ್ಕಟ್ಟನ್ನು ಪರಿಹರಿಸಲು ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಿದ ಮೋದಿ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯ ಸಂಘರ್ಷ ತಾರಕೇರಿದ್ದು, ಇದರ ನಡುವೆ ದೇಶಕ್ಕೆ ಯಾವುದೇ ರೀತಿಯ ಅಡೆತಡೆಗಳಿಲ್ಲದೆ ಇಂಧನ ಪೂರೈಕೆಯಾಗುವಂತೆ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ನೇತೃತ್ವದಲ್ಲಿ ಉನ್ನತ ಸಚಿವಾಲಯ ಸಮಿತಿಯನ್ನು ರಚಿಸಿದೆ.

ಈ ಸಮಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಹಿತ, ಗೃಹ ಸಚಿವ ಅಮಿತ್ ಶಾ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹಿತ ಹಲವು ಸಚಿವರು ಇರಲಿದ್ದಾರೆ.

ಈ ಸಮಿತಿಯೂ ಮುಂದಿನ ದಿನಗಳಲ್ಲಿ ದೇಶಕ್ಕೆ ಪೂರೈಕೆಯಾಗುವ ಇಂಧನಗಳ ಕುರಿತು ಸಮಗ್ರ ಮೇಲ್ವಿಚಾರಣೆ ನಡೆಸಲಿದ್ದು, ಎಲ್ಲಿ ಸಮಸ್ಯೆಗಳಿವೆ, ಜನರಿಗೆ ನಿರಂತರ ಇಂಧನ ಸಿಗುತ್ತಿದ್ದೆಯೇ ಎಂದು ನೋಡಿಕೊಳ್ಳಲಿದೆ. ಈ ಮೂಲಕ ಇಂಧನ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಜ್ಜಾಗಿದೆ.

ಇಂಧನ ಬಿಕ್ಕಟ್ಟಿನ ಸಮಯದಲ್ಲಿ ದೇಶದಲ್ಲಿ ಯಾವುದೇ ರೀತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗದಂತೆ ನೋಡಿಕೊಳ್ಳುವುದು ಮತ್ತು ಜೊತೆಗೆ ಜಾಗತಿಕ ಮಟ್ಟದಲ್ಲಿ ಬೆಲೆ ಗಗನಕ್ಕೇರುತ್ತಿದ್ದರೂ, ದೇಶದಲ್ಲಿ ಯಾವುದೇ ರೀತಿಯಲ್ಲಿ ಅದರ ಹೊರೆ ಬೀಳದಂತೆ ನೋಡಿಕೊಳ್ಳುವುದು ಸಮಿತಿಯ ಪ್ರಮುಖ ಕರ್ತವ್ಯವಾಗಿದೆ.

ಈಗಾಗಲೇ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ್ದು , ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 3 ರೂ.ಗೆ ಇಳಿಕೆ ಮಾಡಿದ್ದರೆ, ಡೀಸೆಲ್ ಮೇಲಿನ ಸುಂಕವನ್ನು ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಲಾಗಿದೆ. ಈ ಮೂಲಕ ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ರಿಲೀಫ್ ನೀಡಿದೆ.

Must Read