ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಐದು ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿದೆ. ನವೆಂಬರ್ 6 ರಿಂದ ನವೆಂಬರ್ 10 ರವರೆಗೆ ನಡೆಯಲಿರುವ ಈ ಅದ್ದೂರಿ ಉತ್ಸವದಲ್ಲಿ ಕರ್ನಾಟಕ ಹಾಗೂ ನೆರೆಯ ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಇಂದು ಜಾತ್ರಾ ಮಹೋತ್ಸವ ಆರಂಭವಾಗಿದೆ. ನಾಳೆ ಶ್ರೀಸ್ವಾಮಿಗೆ ಎಣ್ಣೆ ಮಜ್ಜನ, ಪೂಜೆ ಹಾಗೂ ವಿಶೇಷ ಉತ್ಸವ ನಡೆಯಲಿದೆ. ನರಕ ಚತುದರ್ಶಿ ಪ್ರಯುಕ್ತ ವಿಶೇಷ ಸೇವೆಗಳು ನಡೆಯಲಿವೆ. ದೀವಾಳಿ ಅಮಾವಾಸ್ಯೆಯಂದು ಬೆಳಗ್ಗೆ ಒಂಬತ್ತರ ನಂತರ ಹಾಲರುವೆ ಉತ್ಸವ ನಡೆಯಲಿದೆ. ಕಡೆಯ ದಿನ ಬೆಳಗ್ಗೆ ದೀಪಾವಳಿ ಮಹಾರಥೋತ್ಸವ ನಡೆಯಲಿದೆ.
ನಿತ್ಯವೂ ಬೆಳಗ್ಗೆ 6:30 ರಿಂದ ಸಂಜೆ 6:30 ರವರೆಗೆ ಹಾಗೂ ರಾತ್ರಿ 8:30 ರಿಂದ ರಾತ್ರಿ ಬೀಗಮುದ್ರೆ ಹಾಕುವವರೆಗೆ ಭಕ್ತರಿಗೆ ಶ್ರೀ ಸ್ವಾಮಿಯ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಸಾವಿರಾರು ಮಂದಿ ಜಾತ್ರೆಗೆ ಆಗಮಿಸುವ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಾತ್ರೆಯ ಸಮಯದಲ್ಲಿ ಬೆಟ್ಟಕ್ಕೆ ದ್ವಿಚಕ್ರ ವಾಹನಗಳು ಹಾಗೂ ಆಟೋಗಳ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ 350ಕ್ಕೂ ಹೆಚ್ಚು ಹೆಚ್ಚುವರಿ ಬಸ್ಗಳನ್ನು ನಿಯೋಜಿಸಿದೆ. ಚಾಮರಾಜನಗರ, ಕೊಳ್ಳೇಗಾಲ, ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.



