ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೂರಿನಕಟ್ಟೆ ಮರುನಿರ್ಮಾಣದ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಈ ಪರಿಸ್ಥಿತಿಯ ಕಾವು ನಿಮಿಷಕ್ಕೂ ಹೆಚ್ಚಾಗುತ್ತಿದ್ದು, ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೇ.25ರಿಂದ 27ರವರೆಗೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿರಲಿದೆ. ಯಾವುದೇ ಸ್ಥಳದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪಿನಲ್ಲಿ ನಿಲ್ಲಬಾರದು ಎಂದು ಭಟ್ಕಳ ಎಸಿ ಆದೇಶ ನೀಡಿದ್ದಾರೆ.
ಹಿಸ್ಟರಿ ಏನು?
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅಗಲೀಕರಣದ ವೇಳೆ ಮೂರಿನಕಟ್ಟೆಯನ್ನ ತೆರವು ಮಾಡಲಾಗಿತ್ತು. ಅಗಲೀಕರಣ ಮುಗಿದ ನಂತರ ಹಿಂದೂ ಕಾರ್ಯಕರ್ತರು ಅದೇ ಜಾಗದಲ್ಲಿ ಮೂರಿನಕಟ್ಟೆಯನ್ನು ಮರುನಿರ್ಮಾಣ ಮಾಡಿದ್ದರು. ಆದರೆ ಹೆದ್ದಾರಿಯಲ್ಲಿ ಮೂರಿನಕಟ್ಟೆ ಬೇಡ ಎಂದು ಮುಸ್ಲಿಂ ಸಂಘಟನೆಗಳು ಗಲಾಟೆ ಮಾಡಿದ್ದು, ಮೂರಿನಕಟ್ಟೆಯನ್ನು ತೆಗೆದು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನಿನ್ನೆ ಮುಸ್ಲಿಂ ಸಮುದಾಯದ ನೂರಾರು ಜನ ಮೂರಿನಕಟ್ಟೆ ಬಳಿ ನಿಂತಿದ್ದರು. ಎಲ್ಲವೂ ಮಾತನಾಡುತ್ತಿದ್ದಂತೆಯೇ ಮೂರಿನಕಟ್ಟೆಯನ್ನು ಒಡೆಯುವ ಪ್ರಯತ್ನ ಮಾಡಿದ್ದರು. ಆಗ ಪೊಲೀಸರು ಮಧ್ಯಪ್ರವೇಶ ಮಾಡಿ ತಡೆದಿದ್ದರು. ಇದೇ ಘಟನೆ ಅತಿರೇಕಕ್ಕೆ ಹೋಗಿ ಪೊಲೀಸರ ಮೇಲೆಯೂ ಮುಸ್ಲಿಮರು ಹಲ್ಲೆ ಮಾಡಿದ್ದರು. ಲಾಠಿ ಚಾರ್ಜ್ ಕೂಡ ನಡೆದಿತ್ತು. ಈ ಘಟನೆಯಿಂದ ನಮ್ಮ ಮನಸ್ಸಿಗೆ ನೋವಾಗಿದೆ, ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಹಿಂದೂ ಕಾರ್ಯಕರ್ತರು ನ್ಯಾಯಕ್ಕಾಗಿ ಭಟ್ಕಳ ಠಾಣೆ ಹಾಗೂ ಪೊಲೀಸ್ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದರು.



