July 8, 2026
Wednesday, July 8, 2026
spot_img

ಶಾಸಕರ ಭವನದ ಕಾರುಗಳ ದುರ್ಬಳಕೆಗೆ ಬ್ರೇಕ್: ಹೊಸ ಮಾರ್ಗಸೂಚಿ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಶಾಸಕರ ಭವನದಲ್ಲಿ ಜನಪ್ರತಿನಿಧಿಗಳಿಗಾಗಿ ಮೀಸಲಿಟ್ಟಿರುವ ಸರ್ಕಾರಿ ವಾಹನಗಳು ದುರ್ಬಳಕೆಯಾಗುತ್ತಿರುವುದನ್ನು ತಡೆಯಲು ಕರ್ನಾಟಕ ವಿಧಾನಸಭೆ ಸಚಿವಾಲಯವು ಕಠಿಣ ಕ್ರಮ ಕೈಗೊಂಡಿದ್ದು, ಹೊಸ ಮಾರ್ಗಸೂಚಿಯನ್ನು ಪ್ರಕಟ ಮಾಡಲಾಗಿದೆ.

ಇದರ ಅನ್ವಯ ಇನ್ಮುಂದೆ ಶಾಸಕರು ತಮ್ಮ ಆಪ್ತ ಸಹಾಯಕರು, ಅತಿಥಿಗಳು ಅಥವಾ ಪರಿಚಯಸ್ಥರಿಗೆ ಈ ವಾಹನಗಳನ್ನು ಶಿಫಾರಸು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಶಾಸಕರ ಭವನದ ವಾಹನಗಳನ್ನು ಕೇವಲ ‘ಗ್ರೇಟರ್ ಬೆಂಗಳೂರು ಅಥಾರಿಟಿ’ ಅಂದರೆ ಬೆಂಗಳೂರು ನಗರದ ಗಡಿಯೊಳಗೆ ಮಾತ್ರ ಬಳಸಲು ಅವಕಾಶವಿರುತ್ತದೆ. ಕೇವಲ ವಿಮಾನ ನಿಲ್ದಾಣಕ್ಕೆ ಹೋಗಲು ಮಾತ್ರ ವಿನಾಯಿತಿ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ವಾಹನಗಳನ್ನು ಬೆಂಗಳೂರಿನಿಂದ ಹೊರಗೆ ಕೊಂಡೊಯ್ಯಬೇಕಾದರೆ ಖುದ್ದು ವಿಧಾನಸಭಾ ಸ್ಪೀಕರ್ (ಸಭಾಪತಿ) ಅವರ ಪೂರ್ವಾನುಮತಿ ಪಡೆಯಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದಾರೆ.

ಶಾಸಕರ ಹೆಸರಿನಲ್ಲಿ ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಮತ್ತು ಅತಿಥಿಗಳು ಶಿಫಾರಸು ಪತ್ರಗಳನ್ನು ನೀಡಿ ಹೊರಜಿಲ್ಲೆಗಳಿಗೆ ಪ್ರವಾಸ ಮಾಡಲು ಈ ಕಾರುಗಳನ್ನು ಬಳಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದವು. ಇದರಿಂದಾಗಿ ಬೆಂಗಳೂರಿಗೆ ಬರುವ ಶಾಸಕರಿಗೆ ತುರ್ತು ಸಂದರ್ಭಗಳಲ್ಲಿ ವಾಹನಗಳು ಸಿಗದೆ ತೀವ್ರ ಕೊರತೆ ಎದುರಾಗುತ್ತಿತ್ತು. ಹೀಗಾಗಿ ಈ ನಿರ್ಧಾರ ಮಾಡಬೇಕಾಗಿ ಬಂದಿದೆ.

ಕಾರುಗಳ ಬಳಕೆಗೆ ಪ್ರತಿ ಕಿಲೋಮೀಟರ್‌ಗೆ 8 ರೂ. ನಿಂದ 12 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಇದನ್ನು ಸಂಪೂರ್ಣವಾಗಿ ನಗದು ರಹಿತ ವ್ಯವಹಾರವಾಗಿಸಲಾಗಿದ್ದು, ಶಾಸಕರ ಮಾಸಿಕ ಸಂಬಳದಿಂದಲೇ ನೇರವಾಗಿ ಕಡಿತಗೊಳಿಸಲಾಗುತ್ತದೆ. ಮಾಜಿ ಶಾಸಕರಾಗಿದ್ದರೆ ಅವರ ಪಿಂಚಣಿಯಿಂದ ಹಣ ಕಡಿತವಾಗಲಿದೆ. 

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !