ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ ಟ್ರಂಪ್ ಆಡಳಿತವು ಇರಾನ್ ವಿರುದ್ಧದ ಸಂಘರ್ಷದ ಕುರಿತು ಮಹತ್ವದ ಕಾನೂನು ನಿಲುವನ್ನು ಪ್ರಕಟಿಸಿದೆ. ಇರಾನ್ ವಿರುದ್ಧದ ಯುದ್ಧವು ತಾಂತ್ರಿಕವಾಗಿ ‘ಮುಕ್ತಾಯಗೊಂಡಿದೆ’ ಎಂದು ಘೋಷಿಸುವ ಮೂಲಕ ಶ್ವೇತಭವನವು ಅಮೆರಿಕದ ಸಂಸತ್ತಿನ (ಕಾಂಗ್ರೆಸ್) ಅನುಮೋದನೆಯನ್ನು ಪಡೆಯುವ ಅನಿವಾರ್ಯತೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ಚರ್ಚೆಗಳು ಆರಂಭವಾಗಿವೆ.
ಅಮೆರಿಕದ ಸಂವಿಧಾನ ಮತ್ತು ಯುದ್ಧದ ಅಧಿಕಾರಗಳ ಕಾಯ್ದೆಯ ಪ್ರಕಾರ, ಅಧ್ಯಕ್ಷರು ಯಾವುದೇ ದೇಶದ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸಿದ 60 ದಿನಗಳ ಒಳಗಾಗಿ ಕಾಂಗ್ರೆಸ್‌ನ ಕಡ್ಡಾಯ ಅನುಮೋದನೆ ಪಡೆಯಬೇಕು. ಆದರೆ, ಏಪ್ರಿಲ್ 7 ರಿಂದ ಇರಾನ್ ಮತ್ತು ಅಮೆರಿಕದ ಪಡೆಗಳ ನಡುವೆ ಯಾವುದೇ ಸಶಸ್ತ್ರ ಸಂಘರ್ಷ ನಡೆದಿಲ್ಲ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಪ್ರತಿಪಾದಿಸಿದ್ದಾರೆ.
ಕದನ ವಿರಾಮ ಜಾರಿಯಲ್ಲಿರುವುದರಿಂದ ಈ ‘60 ದಿನಗಳ ಕಾಲಮಿತಿ’ಯು ಅನ್ವಯಿಸುವುದಿಲ್ಲ ಅಥವಾ ಸ್ಥಗಿತಗೊಂಡಿದೆ ಎಂಬುದು ಶ್ವೇತಭವನದ ವಾದ. ಈ ಮೂಲಕ ಸಂಸತ್ತಿನ ಹಸ್ತಕ್ಷೇಪವಿಲ್ಲದೆಯೇ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಅಧ್ಯಕ್ಷರು ಉಳಿಸಿಕೊಳ್ಳಲು ಬಯಸಿದ್ದಾರೆ.
ಟ್ರಂಪ್ ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷವಾದ ಡೆಮೋಕ್ರಾಟ್‌ಗಳು ಬಲವಾಗಿ ಖಂಡಿಸಿದ್ದಾರೆ. ಸೆನೆಟರ್ ಟಿಮ್ ಕೈನೆ ಮಾತನಾಡಿ, “ಯುದ್ಧವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಘೋಷಿಸುವುದು ಕೇವಲ ರಾಜಕೀಯ ತಂತ್ರ. ಕಾನೂನುಬದ್ಧವಾಗಿ ಇದು ಅಸಾಧ್ಯ,” ಎಂದಿದ್ದಾರೆ. ಜನಸಾಮಾನ್ಯರ ಮೇಲೆ ಯುದ್ಧದ ಭೀತಿಯನ್ನು ಹೇರಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಇದೇ ವೇಳೆ ಇರಾನ್ ಜೊತೆಗೆ ರಹಸ್ಯ ಮಾತುಕತೆಗಳು ನಡೆಯುತ್ತಿವೆ ಎಂದು ಟ್ರಂಪ್ ಸುಳಿವು ನೀಡಿದ್ದಾರೆ. ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನಗಳಿಂದಾಗಿ ಇರಾನ್‌ನ ಆರ್ಥಿಕತೆ ಅಕ್ಷರಶಃ ಕುಸಿಯುತ್ತಿದೆ. ಮುಂಬರುವ ದಿನಗಳಲ್ಲಿ ಮಿಲಿಟರಿ ಆಯ್ಕೆಗಳಿಗಿಂತ ಆರ್ಥಿಕ ಒತ್ತಡದ ಮೂಲಕವೇ ಇರಾನ್ ಅನ್ನು ನಿಯಂತ್ರಿಸಲು ಶ್ವೇತಭವನ ಮುಂದಾಗುವ ಸಾಧ್ಯತೆ ಇದೆ.



