ಹೊಸದಿಗಂತ ಡಿಜಿಟಲ್ ಡೆಸ್ಕ್:
CBSE ಶಾಲೆಗಳ 6ನೇ ತರಗತಿ ವಿದ್ಯಾರ್ಥಿಗಳಿಗೆ ಮೂರನೇ ಭಾಷೆ ಕಲಿಯುವ ಕಡ್ಡಾಯ ನಿಯಮ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಂತರ ನಿರ್ದೇಶನ ನೀಡಿದೆ. ಈಗಾಗಲೇ 6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ, 7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಿರುವ ವಿನಾಯಿತಿಯಂತೆಯೇ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ
ಮೂರನೇ ಭಾಷೆ ನೀತಿಯನ್ನು ಏಕಾಏಕಿ ಬದಲಾಯಿಸಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೆಲವು ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು. ಈಗಾಗಲೇ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಂಡು ಹಲವು ವರ್ಷಗಳಿಂದ ಕಲಿಯುತ್ತಿರುವ ಮಕ್ಕಳಿಗೆ ಮಧ್ಯದಲ್ಲೇ ಮತ್ತೊಂದು ಭಾಷೆ ಆಯ್ಕೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ವಾದಿಸಿದ್ದರು. ಹೊಸ ಭಾಷೆಗೆ ಸಂಬಂಧಿಸಿದ ಭೌತಿಕ ಪಠ್ಯಪುಸ್ತಕಗಳು ಲಭ್ಯವಿಲ್ಲ ಎಂಬ ವಿಚಾರವನ್ನೂ ಪೋಷಕರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಇದನ್ನೂ ಓದಿ:
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 6ನೇ ತರಗತಿ ಮಕ್ಕಳಿಗೆ ಏಕಾಏಕಿ ಹೆಚ್ಚುವರಿ ಶೈಕ್ಷಣಿಕ ಒತ್ತಡ ಸೃಷ್ಟಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇಂದ್ರದ ವಾದವೇನು?
ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇಶದ ಸುಮಾರು 99ರಷ್ಟು CBSE ಶಾಲೆಗಳು ಮೂರನೇ ಭಾಷಾ ನೀತಿಗೆ ಅಗತ್ಯ ವ್ಯವಸ್ಥೆ ಮಾಡಿಕೊಂಡಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸುಮಾರು 2,800 ಶಾಲೆಗಳ ಪೈಕಿ ಕೇವಲ 1.2ರಷ್ಟು ಶಾಲೆಗಳು ಮಾತ್ರ ಸಮಸ್ಯೆ ಎದುರಿಸುತ್ತಿವೆ ಎಂದು ಕೇಂದ್ರದ ಪರ ವಾದಿಸಲಾಯಿತು.
ಆದರೆ, ಪ್ರಸ್ತುತ 6ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಿರುವ ವಿನಾಯಿತಿಯನ್ನೇ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು. ಹೊಸ ಭಾಷಾ ವ್ಯವಸ್ಥೆಯನ್ನು ಈ ವಿದ್ಯಾರ್ಥಿಗಳಿಗೆ 2027ರ ಏಪ್ರಿಲ್ 1ರಿಂದ ಜಾರಿಗೆ ತರಬಹುದು ಎಂದು ನ್ಯಾಯಾಲಯ ಸೂಚಿಸಿದೆ.



