May 1, 2026
Friday, May 1, 2026
spot_img

ತೈಲ ಮಾರಾಟವಿಲ್ಲ, ಹಣವೂ ಇಲ್ಲ! ಇರಾನ್ ಆರ್ಥಿಕತೆ ಕುಸಿತದ ಬಗ್ಗೆ ಟ್ರಂಪ್ ಮಹತ್ವದ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಸಂಘರ್ಷದ ನಡುವೆಯೇ ಇಸ್ಲಾಮಿಕ್ ಗಣರಾಜ್ಯವು ಅಮೆರಿಕದೊಂದಿಗೆ ಸಂಧಾನ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ ಎಂದು ಹೇಳಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇರಾನ್‌ನ ಪ್ರಸ್ತುತ ದಯನೀಯ ಸ್ಥಿತಿಯ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಮೆರಿಕ ವಿಧಿಸಿರುವ ಕಠಿಣ ಆರ್ಥಿಕ ದಿಗ್ಬಂಧನಗಳು ಇರಾನ್ ಬೆನ್ನೆಲುಬು ಮುರಿದಿವೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ದಿಗ್ಬಂಧನಗಳ ಕಾರಣದಿಂದ ಇರಾನ್‌ಗೆ ತೈಲ ಮಾರಾಟದಿಂದ ಬರುವ ಆದಾಯ ಸಂಪೂರ್ಣ ಸ್ಥಗಿತಗೊಂಡಿದೆ. ಇರಾನ್‌ನ ಸೇನಾ ಶಕ್ತಿ ಶೇ. 90ರಷ್ಟು ಕುಸಿದಿದೆ. ಡ್ರೋನ್ ಕಾರ್ಖಾನೆಗಳು ಶೇ. 82 ರಷ್ಟು ಮತ್ತು ಕ್ಷಿಪಣಿ ತಯಾರಿಕಾ ಘಟಕಗಳು ಶೇ. 90 ರಷ್ಟು ಧ್ವಂಸಗೊಂಡಿವೆ ಎಂದು ಟ್ರಂಪ್ ಅಂಕಿಅಂಶ ನೀಡಿದ್ದಾರೆ.

ಈ ಎಲ್ಲ ಒತ್ತಡಗಳಿಂದಾಗಿ ಇರಾನ್ ಈಗ ಮಾತುಕತೆಗೆ ಸಿದ್ಧವಾಗಿದೆ, ಆದರೆ ಈ ಗುಪ್ತ ಮಾತುಕತೆಗಳ ಬಗ್ಗೆ ಜಗತ್ತಿನ ಕೆಲವೇ ಮಂದಿಗೆ ಮಾತ್ರ ತಿಳಿದಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಇರಾನ್ ಸರ್ಕಾರವು ತನ್ನದೇ ದೇಶದ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಪ್ರತಿಭಟನೆ ನಡೆಸಿದ ಸುಮಾರು 42,000 ಮುಗ್ಧ ಜನರನ್ನು ಇರಾನ್ ಕೊಂದಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಎಂಟು ಮಂದಿ ಮಹಿಳೆಯರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ತಮ್ಮ ಮಧ್ಯಸ್ಥಿಕೆಯಿಂದ ತಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಬಿಡುವುದಿಲ್ಲ ಎಂಬ ತಮ್ಮ ನಿಲುವನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ. ಸದ್ಯಕ್ಕೆ ನೇರ ಮಿಲಿಟರಿ ದಾಳಿಯ ಸಾಧ್ಯತೆ ಕಡಿಮೆ ಇದ್ದರೂ, ಆರ್ಥಿಕ ದಿಗ್ಬಂಧನದ ಮೂಲಕವೇ ಇರಾನ್ ಅನ್ನು ಹತೋಟಿಗೆ ತರಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !