October 5, 2026
Monday, October 5, 2026
spot_img

‘ಫಾರ್ಮ್ 6 ಬದಲಾವಣೆಗೆ ನಮ್ಮ ಅನುಮತಿ ಇಲ್ಲ’: ಚುನಾವಣಾ ಆಯೋಗಕ್ಕೆ ‘ಸುಪ್ರೀಂ’ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಬಳಸಲಾಗುತ್ತಿರುವ ಫಾರ್ಮ್ 6ರಲ್ಲಿ ಮಾಡಲಾಗಿರುವ ಬದಲಾವಣೆಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.

ನ್ಯಾಯಾಲಯ ಅನುಮೋದನೆ ನೀಡಿಲ್ಲ

ಫಾರ್ಮ್ 6ರ ಪರಿಷ್ಕೃತ ರೂಪಕ್ಕೆ ನ್ಯಾಯಾಲಯ ಯಾವುದೇ ಅನುಮೋದನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ಈ ಬದಲಾವಣೆಗಳನ್ನು ಯಾರು ಮಾಡಿದ್ದಾರೆ ಎಂಬುದನ್ನು ದಾಖಲೆಗಳ ಮೂಲಕ ಪರಿಶೀಲಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ:

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ಸೋಮವಾರ ಈ ವಿಚಾರಣೆ ನಡೆಸಿತು. ಮತದಾರರ ಪಟ್ಟಿಗೆ ಹೊಸ ಹೆಸರು ಸೇರ್ಪಡೆಗೊಳಿಸಲು ಬಳಸುವ ಫಾರ್ಮ್ 6ರಲ್ಲಿ SIR ಪ್ರಕ್ರಿಯೆಯ ಸಂದರ್ಭದಲ್ಲಿ ಹೆಚ್ಚುವರಿ ವಿವರಗಳನ್ನು ಸೇರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಈ ವಿಷಯ ಬಂದಿದೆ.

ಆಯುಕ್ತರ ಒಪ್ಪಿಗೆಯಿಲ್ಲದೆ ನಿರ್ಧಾರ

ಫಾರ್ಮ್ 6ರಲ್ಲಿ ಅರ್ಜಿದಾರರ ಪೂರ್ವಜರ ವಿವರಗಳು ಹಾಗೂ ಹಿಂದಿನ SIRಗೆ ಸಂಬಂಧಿಸಿದ ಮಾಹಿತಿಯನ್ನು ಕೇಳುವ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬುದು ಅರ್ಜಿದಾರರ ಪ್ರಮುಖ ಆಕ್ಷೇಪವಾಗಿದೆ. ಈ ಬದಲಾವಣೆಗಳು ಚುನಾವಣಾ ಆಯೋಗದ ಸಾಫ್ಟ್‌ವೇರ್ ಮೂಲಕ ಜಾರಿಗೆ ಬಂದಿದ್ದು, ಆಯೋಗದ ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪವೂ ಅರ್ಜಿಯಲ್ಲಿ ಕೇಳಿಬಂದಿದೆ.

ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಕೆಲವು ನಿರ್ಧಾರಗಳು ಸಾಮೂಹಿಕ ಅನುಮೋದನೆಯಿಲ್ಲದೆ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದ ಮತ್ತೊಂದು ಅರ್ಜಿಯೊಂದಿಗೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಜೋಡಿಸಿದೆ.

ಇದೇ ವೇಳೆ, ಫಾರ್ಮ್ 6ರ ಘೋಷಣೆಯನ್ನು ಬಿಹಾರ SIR ಕುರಿತ ಮೇ 2026ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಚುನಾವಣಾ ಆಯೋಗ ಈ ಹಿಂದೆ ಹೇಳಿತ್ತು. ಆದರೆ ಇದೀಗ ನ್ಯಾಯಾಲಯವು ತಾನು ಯಾವುದೇ ಪರಿಷ್ಕೃತ ಫಾರ್ಮ್ 6ಕ್ಕೆ ಅನುಮೋದನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.

Must Read