June 9, 2026
Tuesday, June 9, 2026
spot_img

POKಯಲ್ಲಿ ಭುಗಿಲೆದ್ದ ಆಕ್ರೋಶ: ಚುನಾವಣೆಗೆ ಮುನ್ನ ಹಿಂಸಾಚಾರ, 30 ಪ್ರತಿಭಟನಾಕಾರರ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕ್ ಆಕ್ರಮಿತ ಕಾಶ್ಮೀರದ ಹಲವು ಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಂಟಿ ಅವಾಮಿ ಕ್ರಿಯಾ ಸಮಿತಿ (JAAC) ಸಂಘಟನೆಯ ಮೇಲೆ ವಿಧಿಸಲಾದ ನಿಷೇಧದ ವಿರುದ್ಧ ಜನರು ಬೀದಿಗಿಳಿದಿದ್ದು, ಪ್ರತಿಭಟನೆ ವೇಳೆ ಭದ್ರತಾ ಪಡೆಗಳು ಮತ್ತು ಜನರ ನಡುವೆ ಘರ್ಷಣೆ ಸಂಭವಿಸಿದೆ.

ಈ ಹಿಂಸಾಚಾರದಲ್ಲಿ ಕನಿಷ್ಠ 30 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಾಜಕೀಯ ನಿರ್ಧಾರವೇ ಅಸಮಾಧಾನಕ್ಕೆ ಕಾರಣ

ಶಾಸಕಾಂಗದ ಕೆಲವು ಸ್ಥಾನಗಳನ್ನು ಹೊರ ಪ್ರದೇಶದ ನಿರಾಶ್ರಿತರಿಗೆ ಮೀಸಲಿಡುವ ಆಡಳಿತದ ಕ್ರಮಕ್ಕೆ ಸ್ಥಳೀಯ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರಿಂದ ಸ್ಥಳೀಯರ ರಾಜಕೀಯ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ನಿರ್ಧಾರ ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ ಬೆಲೆ ಏರಿಕೆ, ನಿರುದ್ಯೋಗ ಮತ್ತು ಮೂಲಸೌಕರ್ಯ ಸಮಸ್ಯೆಗಳೂ ಜನರ ಅಸಮಾಧಾನಕ್ಕೆ ಕಾರಣವಾಗಿವೆ.

ಇದನ್ನೂ ಓದಿ:

ಚುನಾವಣೆಗೆ ಮುನ್ನ ಬಿಗಿ ಭದ್ರತೆ

ಜುಲೈನಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಕೆಲವೆಡೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಸಾರ್ವಜನಿಕ ಸಭೆಗಳಿಗೆ ನಿರ್ಬಂಧ ಹೇರಲಾಗಿದೆ. ಸಂಘಟನೆಯ ಕೆಲವು ಕಚೇರಿಗಳ ಮೇಲೂ ಆಡಳಿತ ಕ್ರಮ ಕೈಗೊಂಡಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉದ್ಭವಿಸಿರುವ ಈ ಬೆಳವಣಿಗೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿವೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಭುಗಿಲೆದ್ದಿರುವ ಅಶಾಂತಿ, ಅಲ್ಲಿನ ರಾಜಕೀಯ ಸ್ಥಿರತೆ ಹಾಗೂ ಭದ್ರತಾ ಪರಿಸ್ಥಿತಿಗೆ ಹೊಸ ಸವಾಲಾಗಿ ಪರಿಣಮಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !