ಭೂಮಿ ಮೇಲೆ ಸ್ವರ್ಗ ಅಂತೇನಾದ್ರೂ ಇದೆ ಅಂದ್ರೆ ಅದು ಕಾಶ್ಮೀರ. ಅದರಲ್ಲಿಯೂ ಪಹಲ್ಗಾಮ್ ನೋಡಿದ್ದೀರಾ? ಅದರಂತಹ ಸುಂದರ ಜಾಗ ಇನ್ನೊಂದಿಲ್ಲ. ಇಂಥ ಜಾಗದಲ್ಲಿ ಒಂದೆರಡು ದಿನ ಹೋಂ ಸ್ಟೇನಲ್ಲಿ ಇದ್ದು ಬಂದ್ರೆ ಊರಿಗೆ ಹೋಗೋಕೆ ಮನಸಾಗೋದಿಲ್ಲ. ಆದರೆ ತಮ್ಮ ಬಾಲ್ಯವನ್ನು ಇಂಥ ಅದ್ಭುತ ಜಾಗದಲ್ಲಿ ಕಳೆದು ಲೈಫ್‌ನಲ್ಲಿ ಮುಂದುವರಿಯೋದು ಸ್ವಲ್ಪ ಕಷ್ಟನೇ!
ಆದರೆ ಎಲ್ಲರೂ ಹಾಗೇ ಇರೋದಿಲ್ಲ. ತಮ್ಮ ಬಾಲ್ಯದ ಕನಸನ್ನು ನನಸು ಮಾಡೋಕೆ ಶ್ರಮ ಕೂಡ ಹಾಕ್ತಾರೆ. ಇದಕ್ಕೆ ಜೀವಂತ ಉದಾಹರಣೆ ಅಂದ್ರೆ 48 ವರ್ಷದ ಮೆಹ್ರುಖ್ ಇನಾಯತ್ ಮತ್ತಯ 53 ವರ್ಷದ ಗುಲ್ರುಖ್ ಇನಾಯತ್ ಪರ್ಮಾರ್! ಇವರಿಬ್ಬರೂ ಬಾಲ್ಯವನ್ನು ಪಹಲ್ಗಾಮ್‌ನಂತಹ ಸ್ವರ್ಗದಲ್ಲಿ ಕಳೆದ ಅದೃಷ್ಟವಂತರು. ಈ ಸಹೋದರಿಯರು ಬಾಲ್ಯದ ಮನೆಯ ನೆನಪಿಗೆ ಮರುಜೀವ ಕೊಟ್ಟು ಪಹಲ್ಗಾಮ್‌ನಲ್ಲಿ ತಾವು ಆಡಿ ಬೆಳೆದ ಲಾಡ್ಜ್ ಒಂದನ್ನು ಖರೀದಿಸಿದ್ದಾರೆ.

ಈ ಅಕ್ಕ ತಂಗಿಯರು ಶಾಲೆಯಲ್ಲಿ ಟೀಚರ್ ಯಾವುದಾದ್ರೂ ಡ್ರಾಯಿಂಗ್ ಮಾಡಿ ಎಂದು ಹೇಳಿದಾಗ ಕಣ್ಮುಚ್ಚಿಕೊಂಡು ಒಮ್ಮೆ ತಮ್ಮ ಬಾಲ್ಯದ ದಿನವನ್ನು ನೆನಪಿಸಿಕೊಳ್ತಿದ್ರು. ಆ ಸುಂದರ ಊರಿನ ಯಾವುದೇ ಮನೆ ನೋಡಿದ್ರೂ ಬ್ಯಾಕ್‌ಗ್ರೌಂಡ್‌ನಲ್ಲಿ ಅದ್ಭುತವಾದ ಬೆಟ್ಟ, ಪಕ್ಕದಲ್ಲೇ ಹರಿಯುವ ನೀರು, ಮನೆಯ ಸುತ್ತ ಮುತ್ತ ಸಾಕು ಎನಿಸುವಷ್ಟು ಹಸಿರು, ಇಳಿ ಜಾರಿನ ಛಾವಣಿ ಹೊಂದಿರುವ ಮನೆ, ಇಡೀ ಪ್ರಕೃತಿಯೇ ತನ್ನ ಕೈಯಲ್ಲಿ ಈ ಮನೆಯನ್ನು ಇಟ್ಟುಕೊಂಡಿದ್ಯೇನೋ ಎನ್ನುವಂತಿತ್ತು. ಇದೇ ಚಿತ್ರ ಹಾಳೆಯ ಮೇಲೆ ಸರಾಗವಾಗಿ ಮೂಡುತ್ತಿತ್ತು.

ಈ ಬಾಲ್ಯದ ನೆನಪುಗಳೇ ಇಂದು ʼಯೇನಾಸ್ ಲಾಡ್ಜ್ʼ ಆಗಿ ಬದಲಾಗಿವೆ. ಈ ಲಾಡ್ಜ್ ಒಳಗೆ ಕಾಲಿಟ್ಟರೆ ಯಾವೂದೋ ಒಂದು ಮಾಯಾ ಲೋಕಕ್ಕೆ ಹೋದಂತೆ ಭಾಸವಾಗುತ್ತದೆ. ತಮ್ಮ ನೆಚ್ಚಿನ ಹೋಂಸ್ಟೇ ಬಗ್ಗೆ ಮೆಹ್ರುಖ್ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ನಾನು ಬಾಲ್ಯವನ್ನು ಹಿಂತಿರುಗಿ ನೋಡಿದಾಗ, ಅದು ಅತ್ಯಂತ ಸುಂದರ ಕ್ಷಣವಾಗಿ ಕಾಣಿಸುತ್ತದೆ. ಕಾಶ್ಮೀರ ಅದ್ಭುತವಾದ ಸ್ಥಳ, ಇಲ್ಲಿ ಬೆಳೆದ ಯಾರು ಬೇಕಾದರೂ ಈ ಸ್ಥಳ ಎಷ್ಟು ಸುಂದರವಾಗಿದೆ ಎಂದು ಹೇಳಬಲ್ಲರು. ಇದು ಕೇವಲ ಪ್ರಕೃತಿ ಸೌಂದರ್ಯಕ್ಕಾಗಿ ಮಾತ್ರವಲ್ಲ, ಇಲ್ಲಿನ ಸಂಸ್ಕೃತಿಗೂ ಹೆಸರುವಾಸಿಯಾಗಿದೆ ಎಂದು ಹೆಳಿದ್ದಾರೆ.
ಯೇನಾಸ್ ಲಾಡ್ಜ್ ಪಹಲ್ಗಾಮ್‌ನ ಒಂದು ಸುಂದರ ತಾಣವಾಗಿದ್ದು, ಈ ಸಾಂಸ್ಕೃತಿಕ ಸಂಗಮದಲ್ಲಿ ಮೆಹ್ರುಖ್ ಮತ್ತು ಗುಲ್ರುಖ್ ಬೆಳೆದವರು. 1970 ರ ದಶಕದ ಆರಂಭದಲ್ಲಿ ಅವರ ತಾಯಿ ಈ ಲಾಡ್ಜ್ ಅನ್ನು ಖರೀದಿಸಿದ್ದರು. ನದಿಯ ಮೇಲೆ ಕಟ್ಟಲಾಗಿದ್ದ ಮರದ ತೂಗು ಸೇತುವೆಯನ್ನು ದಾಟಿ ಲಾಡ್ಜ್ ತಲುಪುತ್ತಿದ್ದ ನೆನಪು ಅವರಿಗೆ ಇಂದಿಗೂ ಹಸಿರಾಗಿದೆ.

ಗುಲ್ರುಖ್ ಅವರು ಇಲ್ಲಿಗೆ ಬಂದಾಗಲೆಲ್ಲಾ ಲಿಡ್ಡರ್ ನದಿಗೆ ಮುಖ ಮಾಡಿರುವ ಡೆಕ್ ಮೇಲೆ ಸಮಯ ಕಳೆಯುತ್ತಿದ್ದೆವು ಎಂದು ಹೇಳುತ್ತಾ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯದಲ್ಲಿ ನಾವು ಇಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದೆವು. ನೀರಿನಲ್ಲಿ ಆಟವಾಡುವುದು, ನದಿಯ ನೀರಿನಲ್ಲಿ ತೊಳೆದು ಮಾವಿನಹಣ್ಣು ಮತ್ತು ಸೇಬುಗಳನ್ನು ತಿನ್ನುವುದು ಮತ್ತು ಅಪ್ಪ ಹೇಳುವ ವನ್ಯಜೀವಿಗಳ ಕಥೆಗಳನ್ನು ಕೇಳುವುದು ನಮಗೆ ತುಂಬಾ ಇಷ್ಟವಾಗಿತ್ತು, ಎಂದು ಅವರು ನೆನಪಿಸಿಕೊಂಡಿದ್ದಾರೆ.

ಇಲ್ಲಿನ ಪ್ರತಿಯೊಂದು ಪಾಠವೂ ಕೂಡ ಪರಿಸರ ಸಂರಕ್ಷಣೆಯ ಮೇಲೆ ಆಧಾರಿತವಾಗಿತ್ತು. ಮೀರ್ ಇನಾಯತ್ ಉಲ್ಲಾ ಅವರು ಕೇವಲ ಕಥೆಗಾರರಲ್ಲ, ಅವರು ವನ್ಯಜೀವಿಗಳ ರಕ್ಷಣೆಗಾಗಿ ಶ್ರಮಿಸಿದವರು. 1970 ರಲ್ಲಿ ಈ ಲಾಡ್ಜ್ ಕಟ್ಟುವಾಗ ಸಿಮೆಂಟ್ ಮತ್ತು ಕಾಂಕ್ರೀಟ್ ಬಳಕೆಗೆ ಸಾಕಷ್ಟು ನಿರ್ಬಂಧಗಳಿದ್ದವು. ಹಾಗಾಗಿ, ಇದನ್ನು ಪರಿಸರ ಸ್ನೇಹಿಯಾಗಿ ಕೇವಲ ಮರ ಮತ್ತು ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಯೇನಾಸ್ ಲಾಡ್ಜ್ ಪಹಲ್ಗಾಮ್‌ನ ಗದ್ದಲದಿಂದ ಸಂಪೂರ್ಣವಾಗಿ ದೂರವಿದ್ದು, ಇದು ಭೂಮಿಯ ಮೇಲಿನ ಒಂದು ಪುಟ್ಟ ಸ್ವರ್ಗವಿದ್ದಂತೆ ಇದೆ ಎಂದು ಹೇಳಲಾಗುತ್ತದೆ.



