June 14, 2026
Sunday, June 14, 2026
spot_img

ಇಂಡಿಗೋ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ: ಪ್ರಶ್ನೆ ಮಾಡಿದ್ದಕ್ಕೆ ಏನ್ ಅಂದ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆ ಪ್ರಯಾಣಿಕರಲ್ಲಿ ಕೆಲಕಾಲ ಭಯದ ವಾತಾವರಣ ಸೃಷ್ಟಿಸಿತು. ಹಾರಾಟದ ವೇಳೆ ಒಬ್ಬ ಪ್ರಯಾಣಿಕನೊಬ್ಬ ಎರಡು ಬಾರಿ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದು, ವಿಮಾನ ಸಿಬ್ಬಂದಿಯ ತಕ್ಷಣದ ಎಚ್ಚರಿಕೆಯಿಂದ ದೊಡ್ಡ ಅನಾಹುತ ತಪ್ಪಿದೆ.

ಮಾಹಿತಿಯ ಪ್ರಕಾರ, 6E-185 ವಿಮಾನ ಟೇಕ್ ಆಫ್ ಆದ ಸುಮಾರು 15 ನಿಮಿಷಗಳ ಬಳಿಕ ಅದ್ನಾನ್ ಎಂಬ ಪ್ರಯಾಣಿಕ ಮೊದಲ ಬಾರಿ ಎಮರ್ಜೆನ್ಸಿ ಎಕ್ಸಿಟ್ ಡೋರ್‌ನ ಹ್ಯಾಂಡಲ್ ಹಿಡಿದು ತೆರೆಯಲು ಯತ್ನಿಸಿದ್ದಾನೆ. ತಕ್ಷಣ ಕ್ಯಾಬಿನ್ ಸಿಬ್ಬಂದಿ ಅವನನ್ನು ತಡೆದು ಎಚ್ಚರಿಕೆ ನೀಡಿದ್ದು, ಕೆಲಕಾಲ ಆತ ಶಾಂತನಾಗಿದ್ದಾನೆ.

ಇದನ್ನೂ ಓದಿ:

ಆದರೆ ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗೆ ಸಿದ್ಧವಾಗಿದ್ದಾಗ, ಸುಮಾರು 500 ಅಡಿ ಎತ್ತರದಲ್ಲಿದ್ದ ವೇಳೆ ಆತ ಮತ್ತೊಮ್ಮೆ ಅದೇ ಪ್ರಯತ್ನ ಮಾಡಿದ್ದಾನೆ. ಈ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದ ಪೈಲಟ್, ತಕ್ಷಣ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವಿಮಾನವನ್ನು ಮತ್ತೊಮ್ಮೆ ಸುತ್ತಾಟ ನಡೆಸಿ ಸುರಕ್ಷಿತವಾಗಿ ಇಳಿಸಿದ್ದಾರೆ.

ವಿಮಾನ ಸುರಕ್ಷಿತವಾಗಿ ನೆಲಕ್ಕಿಳಿದ ಬಳಿಕ ಆರೋಪಿ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಆರಂಭಿಕ ವಿಚಾರಣೆಯಲ್ಲಿ ತಾನು ಏಕೆ ಹಾಗೆ ವರ್ತಿಸಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದ ಆತ, ಬಳಿಕ “ದೆವ್ವ ಹಿಡಿದಿತ್ತು” ಎಂದು ಹೇಳಿದ್ದಾನೆ.

ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ಕಾಪಾಡಿದ ಸಿಬ್ಬಂದಿಯ ಸಮಯೋಚಿತ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !