ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಸಾರಿಗೆ ಇಲಾಖೆ ನೀಡಿದ್ದ ಟ್ರಾಫಿಕ್ ಫೈನ್ ಶೇ. 50 ರಷ್ಟು ರಿಯಾಯಿತಿ ಆಫರ್ ಭರ್ಜರಿ ಯಶಸ್ಸು ಕಂಡಿದೆ. ರಿಯಾಯಿತಿ ಘೋಷಣೆಯಾದ ಕೇವಲ 4 ದಿನಗಳ ಅವಧಿಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರ ಖಜಾನೆಗೆ ಬರೋಬ್ಬರಿ 6 ಕೋಟಿಗೂ ಅಧಿಕ ರೂ. ದಂಡದ ಹಣ ಹರಿದುಬಂದಿದೆ.
ಲಕ್ಷಾಂತರ ಕೇಸ್ ಇತ್ಯರ್ಥ!
ಬೆಂಗಳೂರು ನಗರದಲ್ಲಿ ಬಾಕಿ ಉಳಿದಿದ್ದ ಕೋಟ್ಯಂತರ ರೂ. ಟ್ರಾಫಿಕ್ ದಂಡದ ವಸೂಲಾತಿಗಾಗಿ ಸರ್ಕಾರ ಈ ಬಂಪರ್ ರಿಯಾಯಿತಿ ಘೋಷಿಸಿತ್ತು. ಇದರ ಲಾಭ ಪಡೆಯಲು ವಾಹನ ಸವಾರರು ಮುಗಿಬಿದ್ದಿದ್ದಾರೆ. ಕೇವಲ ನಾಲ್ಕು ದಿನಗಳಲ್ಲಿ ಲಕ್ಷಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥಗೊಂಡಿದ್ದು, ದಾಖಲೆಯ ಮಟ್ಟದಲ್ಲಿ ದಂಡ ವಸೂಲಿಯಾಗಿದೆ.
ಆನ್‌ಲೈನ್ ಮೂಲಕವೇ ಅತಿ ಹೆಚ್ಚು ಪಾವತಿ
ದಂಡ ಪಾವತಿಸಲು ಸಾರ್ವಜನಿಕರು ಸಂಚಾರಿ ಪೊಲೀಸ್ ಠಾಣೆಗಳು, ಬೆಂಗಳೂರು ಒನ್ ಕೇಂದ್ರಗಳು ಹಾಗೂ ಪ್ರಮುಖವಾಗಿ ‘ಪೇಟಿಎಂ’ ಮತ್ತು ಕರ್ನಾಟಕ ಒನ್ ಆನ್‌ಲೈನ್ ಪೋರ್ಟಲ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಆನ್‌ಲೈನ್ ಆಪ್‌ಗಳ ಮೂಲಕವೇ ಕೋಟ್ಯಂತರ ರೂ.ದಂಡದ ಮೊತ್ತ ಜಮೆಯಾಗಿದೆ ಎಂದು ಸಂಚಾರಿ ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:
ಆಫರ್ ಮಿಸ್ ಮಾಡ್ಕೋಬೇಡಿ!
ಈ ಶೇಕಡಾ 50 ರಷ್ಟು ರಿಯಾಯಿತಿಯು ನಿಯಮಿತ ಅವಧಿಗೆ ಮಾತ್ರ ಲಭ್ಯವಿರಲಿದ್ದು, ಬಾಕಿ ಇರುವ ಎಲ್ಲಾ ಇ-ಚಲನ್ ಪ್ರಕರಣಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ನಿಗದಿತ ಅವಧಿ ಮುಗಿದ ನಂತರ ವಾಹನ ಸವಾರರು ಪೂರ್ಣ ಪ್ರಮಾಣದ ದಂಡವನ್ನೇ ಪಾವತಿಸಬೇಕಾಗುತ್ತದೆ.



