September 22, 2026
Tuesday, September 22, 2026
spot_img

ವಿಡಿಯೋ | ಕಡುಗತ್ತಲಿನಲ್ಲಿ ಪಂಜು ಹಿಡಿದು ನಡೆದ ಮಹಿಳೆಯರು : ಎನ್‌ಆರ್‌ಸಿ ಪರಿಷ್ಕರಣೆಗೆ ಆಗ್ರಹಿಸಿದ ಮಣಿಪುರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಣಿಪುರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಜಾರಿಗೆ ಸಂಬಂಧಿಸಿದಂತೆ ಚರ್ಚೆಗಳು ಅತಿರೇಕಕ್ಕೆ ತಲುಪಿವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ವಲಸೆಯನ್ನು ತಡೆಯಲು ಹಾಗೂ ಸ್ಥಳೀಯ ಜನಸಂಖ್ಯೆಯನ್ನು ರಕ್ಷಣೆ ಮಾಡಲು 1951ನ್ನು ಮೂಲ ವರ್ಷವನ್ನಾಗಿ ಇಟ್ಟುಕೊಂಡು ಜನಗಣತಿಗಿಂತ ಮುನ್ನವೇ ಎನ್‌ಆರ್‌ಸಿ ಪ್ರಕ್ರಿಯೆ ಮಾಡಬೇಕು ಎಂದು ಮಣಿಪುರದ ಜನ ಬೇಡಿಕೆ ಇಟ್ಟಿದ್ದಾರೆ.

ಇದೀಗ ತಮ್ಮ ಬೇಡಿಕೆ ಈಡೇರಿಕೆಗಾಗಿ ಮಹಿಳೆಯರು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಇಂಫಾಲದಲ್ಲಿ ಮಹಿಳೆಯರು ಬೃಹತ್‌ ಪಂಜಿನ ರ್ಯಾಲಿಯನ್ನು ಕೈಗೊಂಡಿದ್ದಾರೆ. ಮಧ್ಯರಾತ್ರಿ ಮನೆಯನ್ನು ತೊರೆದು ಗಾಢ ಕತ್ತಲೆಯನ್ನು ಪಂಜನ್ನು ಹಿಡಿದು ದಣಿವೇ ಆಗದಂತೆ ಮಹಿಳೆಯರು ನಡೆದುಕೊಂಡು ಹೋಗಿದ್ದಾರೆ.

ರಾಜ್ಯದಲ್ಲಿ ಸೆ.1ರಿಂದ ಹೌಸ್‌ ಲಿಸ್ಟಿಂಗ್‌ ಹಾಗೂ ಜನಗಣತಿ ಆರಂಭವಾಗಬೇಕಿತ್ತು. ಸರ್ಕಾರ ಸದ್ಯ ತಾತ್ಕಾಲಿಕವಾಗಿ ಇದನ್ನು ಮುಂದೂಡಿದೆ. ಎನ್‌ಆರ್‌ಸಿ ಜಾರಿಗೆ ತರದೇ ಜನಗಣತಿ ಮಾಡೋದು ಬೇಡ ಎನ್ನುವ ಕೂಗು ಜೋರಾಗಿದ್ದು, ನಿತ್ಯವೂ ಪ್ರತಿಭಟನೆ, ಬಂದ್‌ ಮೂಲಕ ಸರ್ಕಾರಕ್ಕೆ ಪ್ರೆಶರ್‌ ನೀಡಲಾಗುತ್ತಿದೆ. ಮಣಿಪುರದಲ್ಲಿ ಮೈತೇಯಿ, ನಾಗಾ, ಮಣಿಪುರಿ ಮುಸ್ಲಿಂ ಸಮುದಾಯಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ರಾಷ್ಟ್ರೀಯ ನಾಗರಿಕರ ನೋಂದಣಿ ಆಗಲೇಬೇಕು ಎಂದು ಪಟ್ಟು ಹಿಡಿದಿವೆ. ಇತ್ತ ಕುಕಿ ಜೋ ಸಮುದಾಯದ ಸಂಘಟನೆಗಳು ಎನ್‌ಆರ್‌ಸಿ ಅಗತ್ಯವಿಲ್ಲ. 1951ರ ಕಾಲದಲ್ಲಿ ಮಣಿಪುರದ ಗುಡ್ಡಗಾಡು ಪ್ರದೇಶದಲ್ಲಿ ನಮ್ಮ ಪೂರ್ವಜರು ಇದ್ದರು. ರಸ್ತೆ ಹಾಗೂ ಸಂಪರ್ಕ ವ್ಯವಸ್ಥೆಯೇ ಇಲ್ಲದ ಕಾಲದ ದಾಖಲೆಗಳನ್ನು ನಾವು ಹೇಗೆ ತರೋದು? ನಮ್ಮಂತ ಇತರ ಬುಡಕಟ್ಟು ಜನರಿಗೆ ಇದು ಸಮಸ್ಯೆಯಾಗುತ್ತದೆ ಎಂದು ಹೇಳ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !