October 11, 2026
Sunday, October 11, 2026
spot_img

ಮಲ್ಲಿಗೆ, ಕನಕಾಂಬರ, ಸಂಪಿಗೆ… ಹೂವಿನ ಪರಿಮಳದಲ್ಲಿ ಮಿಂದೆದ್ದ ಫ್ಲವರ್ ಮಾರ್ಕೆಟ್: ಹೂವು, ಹಣ್ಣು ಖರೀದಿಗೆ ಮುಗಿಬಿದ್ದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಆರ್‌ ಮಾರ್ಕೆಟ್‌ ಇಂದು ಹಬ್ಬದ ಸಡಗರದಲ್ಲಿ ಮಿಂದೆದ್ದಿದೆ. ಲಕ್ಷ್ಮೀ ಪೂಜೆಗೆ ಬೇಕಾದ ಹೂವು, ಹಣ್ಣು, ಬಾಳೆಕಂದು ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮುಂಜಾನೆಯಿಂದಲೇ ಜನರು ಮಾರುಕಟ್ಟೆಗೆ ಆಗಮಿಸಿದ್ದಾರೆ. ಬೆಳಗಿನ ಜಾವ 2 ಗಂಟೆಯಿಂದಲೇ ವ್ಯಾಪಾರ ಆರಂಭವಾಗಿದ್ದು, ನಂತರ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಹಬ್ಬದ ಖರೀದಿಗೆ ಮುಂಜಾನೆಯಿಂದಲೇ ಜನಸಾಗರ

ಮಹಿಳೆಯರು, ಕುಟುಂಬಗಳು ಹಾಗೂ ವ್ಯಾಪಾರಿಗಳು ಸೇರಿದಂತೆ ಸಾವಿರಾರು ಮಂದಿ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯ ವಿವಿಧ ಭಾಗಗಳಲ್ಲಿ ಹೂವಿನ ಅಂಗಡಿಗಳು ಗ್ರಾಹಕರಿಂದ ತುಂಬಿದ್ದು, ಹಬ್ಬದ ವಾತಾವರಣ ಕಂಡುಬರುತ್ತಿದೆ.

ಮಲ್ಲಿಗೆ, ಕನಕಾಂಬರಕ್ಕೆ ಭಾರೀ ಬೇಡಿಕೆ

ವರಮಹಾಲಕ್ಷ್ಮೀ ಪೂಜೆಗೆ ಬಳಸುವ ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಕಾಕಡ, ಸಂಪಿಗೆ, ಚೆಂಡು ಹಾಗೂ ದುಂಡು ಮಲ್ಲಿಗೆ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಹೆಚ್ಚಿರುವುದರಿಂದ ಕೆಲವು ಹೂವುಗಳ ದರ ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ. ಆದರೂ ಹಬ್ಬದ ಹಿನ್ನೆಲೆಯಲ್ಲಿ ಜನರು ಅಗತ್ಯ ಪ್ರಮಾಣದಲ್ಲಿ ಹೂವುಗಳನ್ನು ಖರೀದಿಸುತ್ತಿದ್ದಾರೆ.

ಹೂವಿನ ದರದಲ್ಲಿ ಏರಿಳಿತ

ಮಾರುಕಟ್ಟೆಯಲ್ಲಿ ಚೆಂಡು ಹೂ 50ರಿಂದ 200 ರೂಪಾಯಿ, ಮಲ್ಲಿಗೆ ಹೂ 500ರಿಂದ 1200 ರೂಪಾಯಿ, ಸೇವಂತಿಗೆ ಹೂ 150ರಿಂದ 450 ರೂಪಾಯಿ, ಕಾಕಡ ಹೂ 300ರಿಂದ 1000 ರೂಪಾಯಿ, ಕನಕಾಂಬರ ಹೂ 2000ರಿಂದ 5000 ರೂಪಾಯಿ, ದುಂಡು ಮಲ್ಲಿಗೆ ಹೂ 1200ರಿಂದ 2000 ರೂಪಾಯಿ ಮತ್ತು ಸಂಪಿಗೆ ಹೂ 100ರಿಂದ 400 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.

ಹೂವಿನ ಹಾರಗಳಿಗೂ ಬೇಡಿಕೆ

ಪೂಜಾ ಅಲಂಕಾರಕ್ಕೆ ಬಳಸುವ ತಾವರೆ, ಗುಲಾಬಿ, ಸಂಪಿಗೆ, ಮಲ್ಲಿಗೆ ಹಾಗೂ ದುಂಡು ಮಲ್ಲಿಗೆ ಹಾರಗಳ ಮಾರಾಟವೂ ಚುರುಕಾಗಿದೆ. ಹಾರದ ಗಾತ್ರ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ಬದಲಾಗುತ್ತಿದ್ದು, ಹೂವುಗಳ ಜತೆಗೆ ಬಾಳೆಕಂದು, ಬಾಳೆಹಣ್ಣು, ತೆಂಗಿನಕಾಯಿ, ಅಡಿಕೆ ಹಾಗೂ ವಿವಿಧ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಖರೀದಿಸಲು ಜನರು ಬೆಳಗ್ಗಿನಿಂದಲೇ ಮಾರುಕಟ್ಟೆಯಲ್ಲಿ ಸುತ್ತಾಡುತ್ತಿದ್ದಾರೆ.

ಇದನ್ನೂ ಓದಿ:

ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸರ ನಿಗಾ

ಜನದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಆರ್‌ ಮಾರ್ಕೆಟ್‌ ಸುತ್ತಮುತ್ತ ಪೊಲೀಸರು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ರಸ್ತೆ ಮಧ್ಯೆ ಅಥವಾ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ವ್ಯಾಪಾರ ನಡೆಯದಂತೆ ಸಿಬ್ಬಂದಿ ನಿಗಾ ವಹಿಸಿದ್ದಾರೆ. ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಚಾರ ನಿಯಂತ್ರಿಸಲಾಗುತ್ತಿದೆ.

ಹಬ್ಬದ ಉತ್ಸಾಹದಲ್ಲಿ ಕಳೆಗಟ್ಟಿದ ಮಾರುಕಟ್ಟೆ

ಹೂವುಗಳ ಪರಿಮಳ, ಬಣ್ಣಬಣ್ಣದ ಹಾರಗಳು ಹಾಗೂ ಖರೀದಿಗೆ ಬಂದ ಜನರಿಂದ ಕೆಆರ್‌ ಮಾರ್ಕೆಟ್‌ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಬೆಲೆಗಳಲ್ಲಿ ಏರಿಳಿತವಿದ್ದರೂ ಪೂಜೆಯ ಸಿದ್ಧತೆಯಲ್ಲಿ ಯಾವುದೇ ಕೊರತೆ ಮಾಡಿಕೊಳ್ಳದ ಜನರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

Must Read