November 3, 2026
Tuesday, November 3, 2026
spot_img

ಕಾಂಗ್ರೆಸ್ ಪೋಸ್ಟರ್ ವಾರ್‌ಗೆ ಮಣಿದ ಬಿಜೆಪಿ ರಾಜ್ಯಾಧ್ಯಕ್ಷ: ಉದ್ದೇಶಪೂರ್ವಕವಾಗಿ ಆ ಪದ ಬಳಸಿಲ್ಲ ಎಂದು ಕ್ಷಮೆ ಕೇಳಿದ ವಿಜಯೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಏಕವಚನದಲ್ಲಿ ವಿವಾದಾತ್ಮಕ ಪದಪ್ರಯೋಗ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೊನೆಗೂ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ದಾವಣಗೆರೆಯಲ್ಲಿ ಹಾಲಿನ ದರ ಏರಿಕೆ ಮತ್ತು ಮೀಸಲಾತಿ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ, “ಈ ನನ್ನ ಮಕ್ಕಳು ಕಾಂಗ್ರೆಸ್ ನವರು ಇದ್ದಾರಲ್ಲಾ…” ಎಂದು ವಿಜಯೇಂದ್ರ ಏಕವಚನದಲ್ಲಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.

ನನ್ನದು ಉದ್ದೇಶಪೂರ್ವಕ ನಡೆಯಲ್ಲ

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, “ದಾವಣಗೆರೆಯಲ್ಲಿ ಆಕ್ರೋಶದ ಭರದಲ್ಲಿ ನನ್ನ ಬಾಯಿಯಿಂದ ಕೆಲವು ಪದಗಳು ಬಂದಿರುವುದು ನಿಜ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನಾನು ಯಾವುದೇ ಉದ್ದೇಶಪೂರ್ವಕವಾಗಿ ಆ ಪದಗಳನ್ನು ಬಳಸಿಲ್ಲ. ನನ್ನ ಈ ಮಾತಿನಿಂದ ಕಾಂಗ್ರೆಸ್ ನಾಯಕರಿಗೆ ಅಥವಾ ಕಾರ್ಯಕರ್ತರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ

ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ ಬೆನ್ನಲ್ಲೇ ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ರಾಜಕೀಯ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. “ಕಾಂಗ್ರೆಸ್‌ನವರು ಸಂಪೂರ್ಣವಾಗಿ ಹತಾಶರಾಗಿದ್ದಾರೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿರುವುದನ್ನು ಜೀರ್ಣಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ದೇಶದ ಜನತೆ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಧಿಕ್ಕರಿಸಿದ್ದರೂ, ರಾಹುಲ್ ಗಾಂಧಿ ಅವರು ದೇಶದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಇದರ ವಿರುದ್ಧ ಇಂದು ಕೋಲಾರದಲ್ಲಿ ಬಿಜೆಪಿ ವತಿಯಿಂದ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:

 ಕಾಂಗ್ರಸ್ ಪೋಸ್ಟರ್ ವಾರ್

ವಿಜಯೇಂದ್ರ ಅವರ ಹೇಳಿಕೆ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು, “ವಿಜಯೇಂದ್ರ ಅವರು ಮೂರು ದಿನಗಳೊಳಗೆ ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು” ಎಂದು ಗಡುವು ನೀಡಿದ್ದರು. ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ನಿವಾಸಗಳ ಮುಂದೆ ಪೋಸ್ಟರ್ ಅಂಟಿಸಿ ಆಕ್ರೋಶ ಹೊರಹಾಕಿದ್ದರು. ಈ ಪ್ರತಿಭಟನೆಗಳು ಮತ್ತು ರಾಜಕೀಯ ಒತ್ತಡಕ್ಕೆ ಮಣಿದು ವಿಜಯೇಂದ್ರ ಅವರು ಕೇವಲ ಕೆಲವೇ ಗಂಟೆಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.

Must Read

Skip to toolbar