October 16, 2026
Friday, October 16, 2026
spot_img

ಪ್ರಧಾನಿ ಮೋದಿ, ಅಮಿತ್ ಶಾ ದೇಶದ್ರೋಹಿಗಳು: ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್ ಗಾಂಧಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮತ್ತು ಗೃಹ ಸಚಿವರು ದೇಶದ್ರೋಹಿಗಳು ಎಂದು ಕರೆದಿದ್ದಾರೆ. ಈ ಮೂಲಕ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ದೇಶವನ್ನು ಮಾರಾಟ ಮಾಡಿದ್ದಾರೆ

ಬಿಜೆಪಿ-ಆರ್‌ಎಸ್‌ಎಸ್‌ನವರು ನಿಮ್ಮ ಮುಂದೆ ಬಂದು ಮೋದಿ-ಅಮಿತ್ ಶಾ ಕುರಿತು ಮಾತನಾಡಿದಾಗ, ಅವರಿಬ್ಬರೂ ದೇಶದ್ರೋಹಿಗಳು ಎಂದು ಬಹಿರಂಗವಾಗಿ ಹೇಳಿ. ಅವರು ದೇಶವನ್ನು ಮಾರಾಟ ಮಾಡಲು ಕೆಲಸ ಮಾಡಿದ್ದಾರೆ ಮತ್ತು ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಸ್ಥೆಗಳು ನಮ್ಮ ಸಂವಿಧಾನ, ವೀರ ಪಾಸಿ ಜಿ, ಗಾಂಧೀಜಿ ಮತ್ತು ಅಂಬೇಡ್ಕರ್ ಆಶಯಗಳ ಮೇಲೆ ದಾಳಿ ನಡೆಸಿವೆ ಎಂದು ವಾಗ್ದಾಳಿ ನಡೆಸಿದರು.

ಮತ್ತೆ ತೈಲಗಳ ಬೆಲೆ ಏರಿಕೆಯಾಗುತ್ತೆ

ಇಂದು ದೇಶದ ನಾಗರಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಆದರೆ ಸರ್ಕಾರವು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದ ರಾಹುಲ್ ಗಾಂಧಿ, ದೇಶವು ದೊಡ್ಡ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ. ಇದಕ್ಕೆ ನಾಲ್ಕು ತಿಂಗಳಲ್ಲಿ ನೀವು ನೋಡಿರದ ಮಟ್ಟದ ಹಣದುಬ್ಬರಕ್ಕೆ ದೇಶ ಸಾಕ್ಷಿಯಾಗಲಿದೆ. ಮುಂಬರುವ ದಿನಗಳಲ್ಲಿ ಗ್ಯಾಸ್, ಭತ್ತ ಮತ್ತು ಖಾದ್ಯ ತೈಲಗಳ ಬೆಲೆಗಳು ಹೇಗೆ ಗಗನಕ್ಕೇರುತ್ತವೆ ಎಂಬುದನ್ನು ನೀವೇ ನೋಡಿ ಎಂದು ಎಚ್ಚರಿಕೆ ನೀಡಿದರು.

ಸುಳ್ಳು ಭರವಸೆಗಳು

ಚುನಾವಣೆಗೆ ಮೊದಲು ಕೇಂದ್ರ ಸರ್ಕಾರ ಜನರಿಗೆ ಪೆಟ್ರೋಲ್ ಮತ್ತು ಅನಿಲದ ಅಭಾವ ಇಲ್ಲ ಮತ್ತು ಇಂಧನ ಬೆಲೆಗಳು ಏರಿಕೆಯಾಗುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಇತ್ತ ಬೆಲೆ ಏರಿಕೆಯಾಗಿದ್ದು, ತೈಲದ ಅಭಾವವೂ ಉಂಟಾಗಿದೆ ಎಂದು ಟೀಕಿಸಿದರು.

Must Read