ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ರಾಷ್ಟ್ರಗಳ ಯಶಸ್ವಿ ಜಾಗತಿಕ ಪ್ರವಾಸ ಮುಗಿಸಿ ರಾಜಧಾನಿ ದೆಹಲಿಗೆ ಮರಳಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಸಂಜೆ ನವದೆಹಲಿಯ ಭಾರತ್ ಮಂಟಪದಲ್ಲಿ ಕೇಂದ್ರ ಮಂತ್ರಿಮಂಡಲದ ಅತ್ಯಂತ ಪ್ರಮುಖ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೋದಿ 3.0 ಸರ್ಕಾರದ ಪ್ರಗತಿ ಪರಿಶೀಲನೆ ಹಾಗೂ ಮುಂಬರುವ ಮಹತ್ವದ ನಿರ್ಧಾರಗಳ ದೃಷ್ಟಿಯಿಂದ ಈ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಈ ವಿಶೇಷ ಸಭೆಯು ಇಂದು ಸಂಜೆ 5:00 ಗಂಟೆಗೆ ಆರಂಭವಾಗಲಿದ್ದು, ಎಲ್ಲಾ ಕೇಂದ್ರ ಸಂಪುಟ ಸಚಿವರು ಮತ್ತು ರಾಜ್ಯ ಸಚಿವರು ಕಡ್ಡಾಯವಾಗಿ ಭಾಗವಹಿಸಲಿದ್ದಾರೆ. ಎಲ್ಲಾ ಸಚಿವರಿಗೆ ದೆಹಲಿಯಲ್ಲೇ ಇರಲು ಈಗಾಗಲೇ ಕಡ್ಡಾಯವಾಗಿ ಸೂಚನೆ ನೀಡಲಾಗಿದೆ.
ಮೋದಿ 3.0 ಸರ್ಕಾರದ ಎರಡು ವರ್ಷಗಳ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಇತ್ತೀಚಿನ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಬಳಿಕ, ಈ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನಾರಚನೆ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ಜೂನ್ 2024 ರಿಂದೀಚೆಗೆ ವಿವಿಧ ಸಚಿವಾಲಯಗಳು ಕೈಗೊಂಡಿರುವ ಪ್ರಮುಖ ಯೋಜನೆಗಳ ಪ್ರಗತಿ, ಮೂಲಸೌಕರ್ಯ ಯೋಜನೆಗಳು ಮತ್ತು ಸುಧಾರಣೆಗಳ ವರದಿಯನ್ನು ಪ್ರಧಾನಿ ಪರಿಶೀಲಿಸಲಿದ್ದಾರೆ.
ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಾಗೂ ಇದರಿಂದ ಭಾರತದ ಇಂಧನ ಮತ್ತು ಆರ್ಥಿಕತೆ ಮೇಲಾಗುವ ಜಾಗತಿಕ ಪರಿಣಾಮಗಳ ಕುರಿತು ಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ.



