ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಹಿಂದಿನ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇತರ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯನ್ನು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರವು ಸಂಪೂರ್ಣವಾಗಿ ರದ್ದುಗೊಳಿಸಿದೆ.
ಮುಸ್ಲಿಂ ಸಮುದಾಯಕ್ಕೆ ಶಾಕ್
ಇದರಿಂದಾಗಿ ಮಮತಾ ಸರ್ಕಾರದಲ್ಲಿ ಒಬಿಸಿ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದ ಹಲವು ಮುಸ್ಲಿಂ ಸಮುದಾಯಗಳಿಗೆ ಇದೀಗ ಈ ಕೋಟಾದಿಂದ ಗೇಟ್ ಪಾಸ್ ನೀಡಲಾಗಿದೆ. ಈ ಮೂಲಕ ಶೇಕಡಾ 17 ರಷ್ಟು ಒಬಿಸಿ ಮೀಸಲಾತಿಯು ಈಗ ಶೇ. 7ಕ್ಕೆ ಇಳಿಕೆಯಾಗಿದೆ.
ಇದೀಗ ಕೇವಲ 66 ಸಮುದಾಯಗಳಿಗೆ ಮಾತ್ರ ಒಬಿಸಿ ಮೀಸಲಾತಿಯನ್ನು ಸೀಮಿತಗೊಳಿಸಿ ಹೊಸ ಅಧಿಸೂಚನೆ ಹೊರಡಿಸಿದೆ.
ಶೇ.17 ರಷ್ಟು ಒಬಿಸಿ ಮೀಸಲಾತಿ ಘೋಷಿಸಿದ್ದ ದೀದಿ
2012ರಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಟಿಎಂಸಿ ಸರ್ಕಾರವು ‘ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟು ಶೇ.17 ರಷ್ಟು ಒಬಿಸಿ ಮೀಸಲಾತಿಯನ್ನು ಘೋಷಿಸಿತ್ತು. ಬಳಿಕ ಒಬಿಸಿ ಸಮುದಾಯಗಳನ್ನು ಎರಡು ಉಪವರ್ಗಗಳಾಗಿ ವಿಂಗಡಿಸಲಾಗಿತ್ತು. ವರ್ಗ ‘ಎ’ ಶೇ.10 ರಷ್ಟು ಮೀಸಲಾತಿ ನೀಡಲಾಗಿತ್ತು. ವರ್ಗ ‘ಬಿ’ ಶೇ.7 ರಷ್ಟು ಮೀಸಲಾತಿ ನಿಗದಿಪಡಿಸಲಾಗಿತ್ತು.
66 ಒಬಿಸಿ ಗುಂಪುಗಳಿಗೆ ಮಾತ್ರ ಅನ್ವಯ
ಇದೀಗ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸರ್ಕಾರವು ವರ್ಗ ‘ಎ’ ಮತ್ತು ವರ್ಗ ‘ಬಿ’ ಎಂಬ ಉಪವರ್ಗಗಳನ್ನೇ ಸಂಪೂರ್ಣವಾಗಿ ರದ್ದುಗೊಳಿಸಿದೆ. ಕೇವಲ 2010 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ 66 ಒಬಿಸಿ ಗುಂಪುಗಳಿಗೆ ಮಾತ್ರ ಶೇ.೭ ರಷ್ಟು ಕೋಟಾವನ್ನು ಅನ್ವಯಿಸಿ ಆದೇಶ ಹೊರಡಿಸಿದೆ.



