ಹೊಸ ದಿಗಂತ ವರದಿ, ಬೆಳಗಾವಿ :
ಬೆಳಗಾವಿ ಜಿಲ್ಲಾದ್ಯಂತ ಕಾನೂನು ಬಾಹಿರ ಚುಟುವಟಿಕೆಗಳಿಗೆ ಬೆಳಗಾವಿ ಪೊಲೀಸರು ಸಮರ ಸಾರುವುದ ಜೊತೆಗೆ ಅಕ್ರಮಕ್ಕೆ ಕಡಿವಾಣ ಹಾಕುವುದಕ್ಕೆ ಮುಂದಾಗಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಮತ್ತು ತಿಳಕವಾಡಿ ಪೊಲೀಸರ್ ಠಾಣೆ ವ್ಯಾಪ್ತಿಯಲ್ಲಿ, ಮದ್ಯ ಹಾಗೂ ಗಾಂಜಾ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ಬೆಳಗಾವಿ ನಗರದ ಪ್ರಮುಖ ಏರಿಗಳಲ್ಲಿ ಸಾರ್ವಜನಿಕವಾಗಿ ಮಾದಕ ವಸ್ತುಗಳು ಸೇವನೆ ಮಾಡುತ್ತಿದ್ದರು. ಜೊತೆಗೆ ಮದ್ಯ ಹಾಗೂ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
3,580 ರೂ. ಮೌಲ್ಯದ ವಸ್ತು ವಶ
ಬೆಳಗಾವಿ ನಗರ ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಹಿರೇಬಾಗೇವಾಡಿ-ಬಸಾಪೂರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಸವರಾಜ ಚಂದ್ರಶೇಖರ ಧೂಳಪ್ಪನವರ (50) ಎಂಬಾತನನ್ನು ಪಿಎಸ್ಐ ಬಸವರಾಜ ಮಿಟಗಾರ ಹಾಗೂ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 3,580 ರೂಪಾಯಿ ಮೌಲ್ಯದ ವಿವಿಧ ಬ್ರಾಂಡ್ ಗಳ ವಿಸ್ಕಿ ಪ್ಯಾಕೆಟ್ ಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದೆಡೆ, ತಿಲಕವಾಡಿ ಠಾಣೆಯ ಪಿಐ ಪರಶುರಾಮ ಪೂಜೇರಿ ನೇತೃತ್ವದ ತಂಡವು ನಗರದ ಆರ್ಪಿಡಿ ಹಾಗೂ ಜೈನ್ ಕಾಲೇಜುಗಳ ಬಳಿ ಅಸಹಜವಾಗಿ ವರ್ತಿಸುತ್ತಿದ್ದ ಆಕಾಶ್ ಬಸೂರ್ (25) ಮತ್ತು ಅಭಿಷೇಕ್ ಹರಿಜನ್ (25) ಎಂಬ ಯುವಕರನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಇವರಿಬ್ಬರೂ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ .
ಯಶಸ್ವಿ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಶ್ಲಾಘಿಸಿದ್ದಾರೆ.



