ಹೊಸದಿಗಂತ ವರದಿ ಹುಬ್ಬಳ್ಳಿ:
ಕಬ್ಬಿನ ಹಾಗೂ ಸಕ್ಕರೆಗೆ ಬೆಂಬಲ ಬೆಲೆ ಹಾಗೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಮುಂದಿನ ಹೋರಾಟ ಕುರಿತು ರೈತರೊಂದಿಗೆ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.
ಸೋಮವಾರ ತಡರಾತ್ರಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ರೈತರ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಮಧ್ಯರಾತ್ರಿ ಒಂದು ಗಂಟೆಯಿಂದ ನಸುಕಿನ ಜಾವ ನಾಲ್ಕರ ವರೆಗೆ ಸಂಧಾನ ಸಭೆ ನಡೆಯಿತು. ಈ ವೇಳೆ ಕೇಂದ್ರ ಸಚಿವರು ರೈತರ ಬೇಡಿಕೆಗಳ ಈಡೇರಿಸುವ ಭರವಸೆ ಹಾಗೂ ಸಮಯಾವಕಾಶ ನೀಡಲು ಮನವಿ ಮಾಡಿದರು.
ಸಭೆ ಬಳಿಕ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜೇರಿ, ಕಬ್ಬ ಬೆಳೆಗೆ ಹಾಗೂ ಸಕ್ಕರೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಹಲವಾರು ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಈಗ ಬೆಳಗಾವಿಯಿಂದ ಧಾರವಾಡ ವರೆಗೂ ಪಾದಯಾತ್ರೆ ನಡೆದಿದೆ. ಕೇಂದ್ರ ಸಚಿವರು ಸಭೆ ಮಾಡಿ ಬೇಡಿಕೆ ಈಡೇರಿಸಲು ಹಾಗೂ ಹೋರಾಟ ಹಿಂಪಡೆಯಲು ಮನವಿ ಮಾಡಿದ್ದಾರೆ. ನಮ್ಮ ಬೇಡಿಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೋಮವಾರ ರೈತ ಸಮೂಹದೊಂದಿಗೆ ಸಭೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೈತ ಮುಖಂಡರ ಜೊತೆಗೆ ಸಭೆ ಸೌಹಾರ್ದಯುತವಾಗಿ ನಡೆಯಿತು. ಬೇಡಿಕೆ ಈಡೇರಿಸಲು ಸಮಿತಿ ರಚಿಸಲಾಗಿದ್ದು, ಇದಕ್ಕೆ ಸಹಕಾರ ನೀಡಬೇಕು ಎಂದು ರೈತ ಮುಖಂಡರ ಮನವಿ ಮಾಡಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸಭೆಯಲ್ಲಿ ಸಂಸದ ಜಗದೀಶ ಶೆಟ್ಟರ, ಶಾಸಕರಾದ ಸಿ.ಸಿ. ಪಾಟೀಲ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಶಶಿಕಾಂತ ಗೂರುಜಿ ಸೇರಿದಂತೆ ಅನೇಕರಿದ್ದರು.



