ಹೊಸ ದಿಗಂತ ವರದಿ,ಚಿತ್ರದುರ್ಗ:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ೫೦ ವರ್ಷದ ರಾಜಕೀಯ ಜೀವನದ ಹಿನ್ನೆಲೆಯಲ್ಲಿ ಮೇ ೯ ರಂದು ನಡೆಯಲಿರುವ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಬೇಕಾದ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.
ಚಿತ್ರದುರ್ಗ ನಗರದ ಹೊರವಲಯದ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಪಕ್ಕದಲ್ಲಿರುವ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಅಭಿಮಾನೋತ್ಸವ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಯಡಿಯೂರಪ್ಪನವರ ಸುಮಾರು ೧೦ ಲಕ್ಷ ಸಂಖ್ಯೆಯ ಅಭಿಮಾನಿಗಳು ಆಗಮಿಸಲಿದ್ದಾರೆ. ರಾಜ್ಯದ ವಿವಿಧ ೧೦೦೦ ಮಠಾದೀಶರು ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹಸಚಿವರಾದ ಅಮಿತ್ ಶಾ ಆಗಮಿಸಲಿದ್ದಾರೆ. ಮೇ ೯ ರಂದು ಬೆಳಿಗ್ಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಹಾಗಾಗಿ ಅಮಿತ್ ಶಾ ಅವರು ಮಧ್ಯಾಹ್ನದ ನಂತರ ಇಲ್ಲಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮೊದಲು ನಿಗದಿಪಡಿಸಿದ್ದ ಸಮಯ ಬದಲಾಯಿಸಿ ಮಧ್ಯಾಹ್ನ ೨ ರಿಂದ ೫ ಗಂಟೆಯವರೆಗೆ ಕಾರ್ಯಕ್ರಮ ನಡೆಸಲಾಗುವುದು. ಮಧ್ಯಾಹ್ನ ೩.೪೫ರ ವೇಳೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಮಠಾಧೀಶರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆಂಬ ಅಭಿಲಾಷೆ ಇತ್ತು. ಆದರೆ ಸಮಯದ ಕೊರತೆ, ಕೆಲಸದ ಒತ್ತಡದಿಂದ ಅಗುತ್ತಿಲ್ಲ. ಹಾಗಾಗಿ ಎಲ್ಲಾ ಮಠಾಧೀಶರು ಕಾರ್ಯಕ್ರಮಕ್ಕೆ ಆಗಮಿಸಿ ಯಡಿಯೂರಪ್ಪ ಅವರಿಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದ ಅವರು, ರಾಜ್ಯದ ವಿವಿಧೆಡೆಗಳಿಂದ ಸುಮಾರು ೧೦ ಸಾವಿರ ಬಸ್ಸುಗಳು ಹಾಗೂ ೪೦ ರಿಂದ ೬೦ ಸಾವಿರ ಕಾರು ಮತ್ತಿತರ ಲಘುವಾಹನಗಳು ಆಗಮಿಸಲಿವೆ. ನಮ್ಮ ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಸಿಗುತ್ತಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರ ೫೦ ವರ್ಷಗಳ ಸಮಾಜ ಸೇವೆ, ಜೀವನ ಚರಿತ್ರೆಯ ಕಾರ್ಯಕ್ರಮವನ್ನು ಒಂದು ಸಾಂಸ್ಕೃತಿಕ ಹಬ್ಬದ ರೀತಿ ಆಚರಿಸಲು ನಿರ್ಧರಿಸಿದ್ದೇವೆ. ಮೇ ೮ ರಂದು ಸಂಜೆ ಯಡಿಯೂರಪ್ಪನವರ ಪುರಪ್ರವೇಶ ನಡೆಯಲಿದೆ. ೨೪ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಅವರ ಜೀವನ ಚರಿತ್ರೆ ಮತ್ತು ಸದನದಲ್ಲಿ ಯಡಿಯೂರಪ್ಪನವರು ಎಂಬ ಸಂಬಂಧ ‘ಕೆಂದಾವರೆ – ಕಮಲದಲ್ಲಿ ಅರಳಿದ ಹೂ’, ‘ಸದನದಲ್ಲಿ ಶಿಕಾರಿ’ ಎಂಬ ೨ ಗ್ರಂಥಗಳನ್ನು ಬಿಡುಗಡೆ ಮಾಡಲಾಗುವುದು.ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಶಾಸಕರಾದ ಹರೀಶ್ ಪೂಂಜ, ರಘು ಕೌಟಿಲ್ಯ, ಬಾಸ್ಕರ್‌ರಾವ್, ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ , ಎಸ್.ಕೆ.ಬಸವರಾಜನ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಲಿಂಗಮೂರ್ತಿ, ಮಲ್ಲಿಕಾರ್ಜನ್, ಸಂಪತ್ ಕುಮಾರ್, ಸೌಭಾಗ್ಯ ಬಸವರಾಜನ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಸೋಮೇಂದ್ರ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಯಶವಂತ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.



