October 8, 2026
Thursday, October 8, 2026
spot_img

ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತಿ ವೇಗದ ಚಾಲನೆಯಿಂದಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಚಾಲಕ ಪಾರಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ಬಳಿ ನಡೆದಿದೆ.

ರಾಯಚೂರಿನಿಂದ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ‘ಗ್ರೀನ್ ಲೈನ್’ ಸಂಸ್ಥೆಯ ಖಾಸಗಿ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ಕಾರಿನ ನಡುವೆ ಆಲೂರು ಸಮೀಪ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಅಪಘಾತ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಬಸ್ ಪ್ರಯಾಣಿಕರು ತಕ್ಷಣ ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಈ ಕಾರ್ಯಾಚರಣೆಯ ನಂತರ ಬಸ್ ಪ್ರಯಾಣಿಕರು ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲೇ ಚಳಿಯಲ್ಲಿ ಕಾಲ ಕಳೆಯಬೇಕಾಯಿತು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರು ಚಾಲಕನ ಅತಿಯಾದ ವೇಗವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read