ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೋಸ್ಟ್ ವಾಂಟೆಡ್ ಉಗ್ರ, 2019 ರ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಪಾಕಿಸ್ತಾನದಲ್ಲಿ ಅಪರಿಚಿತನ ಗುಂಡಿನ ದಾಳಿಗೆ ಹತ್ಯೆಯಾಗಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಮುಜಫರಾಬಾದ್ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪರಿಚಿತ ಬಂಧೂಕುದಾರಿ ಗುಂಡಿನ ದಾಳಿ ನಡೆಸಿದ ಪರಿಣಾಮ ಹಮ್ಜಾ ಬುರ್ಹಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಯಾರು ಹಮ್ಜಾ ಬುರ್ಹಾನ್?
ಪುಲ್ವಾಮದ ರತ್ನಿಪೋರಾ ಪ್ರದೇಶದ ಖಾರ್ಬತ್ಪೋರಾದಲ್ಲಿ ಜನಿಸಿದ ಬುರ್ಹಾನ್, 2017 ರಲ್ಲಿ, ಉನ್ನತ ವ್ಯಾಸಂಗಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದನು. ಆದರೆ ಆತ ಅಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಬದರ್‌ಗೆ ಸೇರ್ಪಡೆಯಾಗಿದ್ದ. ಬಳಿಕ ಕಡಿಮೆ ಅವಧಿಯಲ್ಲಿಯೇ ಆ ಸಂಘಟನೆಯಲ್ಲಿ ಕಮಾಂಡರ್ ಹುದ್ದೆಗೆ ಏರಿದ್ದನು. ನಂತರ 2019 ರಲ್ಲಿ ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ನಡೆದಿದ್ದ ಬಾಂಬ್ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳೊಂದಿಗೆ ಬುರ್ಹಾನ್ ಪ್ರಮುಖ ಭಾಗಿಯಾಗಿದ್ದನು.
ಈತನ ಕುರಿತು ತನಿಖೆ ನಡೆಸಿದ ಗುಪ್ತಚರ ಇಲಾಖೆಯ ವರದಿಯನ್ನು ಆಧರಿಸಿ ಕೇಂದ್ರ ಗೃಹ ಸಚಿವಾಲಯ 2022 ರಲ್ಲಿ ಅಧಿಕೃತವಾಗಿ ಭಯೋತ್ಪಾದಕ ಎಂದು ಘೋಷಿಸಿತು.



