ಪಿವಿಆರ್’ನ 71 ಕೋಟಿ ರುಪಾಯಿ ನಷ್ಟ ಹೇಳುತ್ತಿರುವ ಕತೆ: ಕೈಕೊಡುತ್ತಿರುವ ಬಾಲಿವುಡ್,ಹಾಲಿವುಡ್; ಪ್ರಾದೇಶಿಕ ಸಿನಿಮಾ ಶೈನಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಂದು ಕಾಲದಲ್ಲಿ ಚಿನ್ನದ ಮೊಟ್ಟೆಯಿಡೋ ಬಾತುಕೋಳಿಗಳು ಎಂಬಂತೆ ಬಿಂಬಿತವಾಗಿಬಿಟ್ಟಿದ್ದ ಬಾಲಿವುಡ್‌ ಮತ್ತು ಹಾಲಿವುಡ್‌ ಚಿತ್ರಗಳು ಈಗ ನಿರ್ಮಾಪಕರ ಪಾಲಿಗೆ ಕೈ ಕೊಡುತ್ತಿವೆ. ಕೇವಲ ಸ್ಟಾರ್‌ ಗಳ ಇರುವಿಕೆಯಿಂದಲೇ ಚಿತ್ರ ಓಡುವುದಿಲ್ಲ ಚಲನಚಿತ್ರ ಎಂದಾಕ್ಷಣ ಅದಕ್ಕೊಂದು ಉತ್ತಮ ಕಥಾಹಂದರ ಅಥವಾ ಕಂಟೆಂಟ್‌ ಇರಬೇಕು ಎಂಬ ಸಂದೇಶವನ್ನು ವೀಕ್ಷಕರು ರವಾನಿಸಿದ್ದಾರೆ ಎಂಬ ಅಂಶವನ್ನು ಇತ್ತೀಚೆಗಷ್ಟೇ ಎರಡನೇ ತ್ರೈಮಾಸಿಕದಲ್ಲಿ 71 ಕೋಟಿ ರುಪಾಯಿಗಳ ನಷ್ಟವನ್ನು ವರದಿ ಮಾಡಿರೋ ಮಲ್ಟಿಫ್ಲೆಕ್ಸ್‌ ದೈತ್ಯ ಪಿವಿಆರ್‌ ತೆರೆದಿಟ್ಟಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ ಹಾಲಿವುಡ್‌ ಮತ್ತು ಬಾಲಿವುಡ್‌ ಚಿತ್ರಗಳ ನೀರಸ ಪ್ರದರ್ಶನವು ಟಿಕೆಟ್‌ ದರದಲ್ಲಿನ ಕುಸಿತ ಹಾಗೂ ಚಿತ್ರಮಂದಿರಗಳಿಗೆ ಜನರ ಆಗಮನದ ಮೇಲೆ ಪ್ರಭಾವ ಬೀರಿದೆ ಎಂದು ಸ್ವತಃ ಪಿವಿಆರ್‌ ಹೇಳಿಕೊಂಡಿದೆ.

ಕಂಟೆಂಟ್‌ ಮುಖ್ಯವೇ ಹೊರತು ಸ್ಟಾರ್‌ ಗಳ ಉಪಸ್ಥಿತಿಯಲ್ಲ:
ಚಿತ್ರಕ್ಕೆ ಕಂಟೆಂಟ್ ಪ್ರಮುಖವಾಗಿರುವುದರಿಂದ ಕೇವಲ ಸ್ಟಾರ್ ಇರುವಿಕೆಯಿಂದಲೇ ಸಿನಿಮಾಗಳು ವೀಕ್ಷಕರ ಗಮನ ಸೆಳೆಯುತ್ತಿಲ್ಲ. ಬಾಲಿವುಡ್ ಚಲನಚಿತ್ರಗಳ ನಿರಂತರ ಕಳಪೆ ಪ್ರದರ್ಶನವು ನಷ್ಟಕ್ಕೆ ಮೂಲ ಕಾರಣ ಎಂದು ಪಿವಿಆರ್‌ ಹೇಳಿದೆ.

ಬ್ರಹ್ಮಾಸ್ತ್ರ ಭಾಗ ಒಂದನ್ನು ಹೊರತುಪಡಿಸಿ, ಲಾಲ್ ಸಿಂಗ್ ಚಡ್ಡಾ, ರಕ್ಷಾಬಂಧನ್, ಲೈಗರ್ ನಂತಹ ಇತರ ದೊಡ್ಡ ಬಜೆಟ್ ಬಾಲಿವುಡ್ ಚಲನಚಿತ್ರಗಳು ನಿರೀಕ್ಷೆಗಿಂತ ಕಡಿಮೆ ಪ್ರದರ್ಶನ ನೀಡಿವೆ.‌ ಹಾಲಿವುಡ್‌ ಚಿತ್ರಗಳ ಪಾಲಿಗೂ ಈ ತ್ರೈಮಾಸಿಕವು ಕಹಿಯಾಗಿ ಮಾರ್ಪಟ್ಟಿದೆ. ಈ ಸಮಯದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅವುಗಳ ಸಂಗ್ರಹವು ಕಳೆದ ಎರಡು ದಶಕಗಳಲ್ಲೇ ಅತ್ಯಂತ ಕೆಟ್ಟದಾಗಿದೆ ಎನ್ನಲಾಗಿದೆ. 2020ರ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಹಾಲಿವುಡ್‌ ಚಲನಚಿತ್ರಗಳ ಬಾಕ್ಸ್ ಆಫೀಸ್ ಸಂಗ್ರಹಗಳು 2023ನೇ ವರ್ಷದಲ್ಲಿ 47 ಶೇಕಡಾದಷ್ಟು ಕುಸಿತ ಕಂಡಿವೆ.

ಪ್ರಾದೇಶಿಕ ಸಿನೆಮಾಗಳೇ ಜೋರು:
ಈ ವರ್ಷದಲ್ಲಿ ಹೊರಬಂದ ಪ್ರಾದೇಶಿಕ ಸಿನೆಮಾಗಳು ಉತ್ತಮ ಪ್ರದರ್ಶನ ಕಂಡಿವೆ. ತಮ್ಮ ಅತ್ಯುತ್ತಮ ಕಥಾಹಂದರದಿಂದಾಗಿ ವೀಕ್ಷಕರ ಮನ ಗೆಲ್ಲುವಲ್ಲಿ ಹಾಲಿವುಡ್‌ ಬಾಲಿವುಡ್‌ ಗಳಿಗಿಂತಲೂ ಪ್ರಾದೇಶಿಕ ಚಿತ್ರಗಳು ಸೈ ಎನಿಸಿಕೊಂಡಿವೆ.

ಪಿವಿಆರ್‌ ನಲ್ಲಿಯೂ ಕೂಡ ಪ್ರಾದೇಶಿಕ ಚಿತ್ರಗಳೇ ಹೆಚ್ಚಿನ ಲಾಭ ತಂದುಕೊಟ್ಟಿವೆ. ಪ್ರಾದೇಶಿಕ ಚಲನಚಿತ್ರಗಳ ಗಲ್ಲಾಪೆಟ್ಟಿಗೆಯ ಕೊಡುಗೆಯು 2020ರ ಎರಡನೇ ತ್ರೈಮಾಸಿಕದಲ್ಲಿ 28 ಶೇಕಡಾದಷ್ಟಿತ್ತು. ಇದು 2023ರ ಎರಡನೇ ತ್ರೈಮಾಸಿಕದಲ್ಲಿ 44 ಶೇಕಡಾಗೆ ಏರಿಕೆಯಾಗಿದೆ. ಸೀತಾ ರಾಮಂ, ಕಾರ್ತಿಕೇಯ 2, ತಿರುಚಿತ್ರಂಬಲಂ, ರಾಕೆಟ್ರಿ ಮತ್ತು ವಿಕ್ರಾಂತ್ ರೋಣ ಮುಂತಾದ ಚಲನಚಿತ್ರಗಳು ಉತ್ತಮ ಪ್ರದರ್ಶನ ನೀಡಿವೆ.

ಪಿವಿಆರ್‌ ನಷ್ಟದ ಕುರಿತಾಗಿ ನಾವು ಈ ಹಿಂದೆ ಮಾಡಿರೋ ವರದಿ ಇಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!