May 15, 2026
Friday, May 15, 2026
spot_img

ಪಶು ವೈದ್ಯಾಧಿಕಾರಿಯ ಅಪರೂಪದ ಸಾಧನೆ: ವರ್ಲ್ಡ್ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಚಿನ್ನ,ಬೆಳ್ಳಿ ಪದಕ ಪಡೆದ ಡಾಕ್ಟ್ರು

ಹೊಸದಿಗಂತ ವರದಿ ಶಿವಮೊಗ್ಗ:

ಥೈಲ್ಯಾಂಡ್‌ನ ಶ್ರೀರಾಚಾದಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ ಶಿಕಾರಿಪುರ ತಾಲೂಕು ಮುಖ್ಯ ಪಶುವೈದ್ಯ ಅಧಿಕಾರಿ (ಆಡಳಿತ) ಆಗಿರುವ ಡಾ.ರವಿ ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದ್ದಾರೆ.

50 ವರ್ಷ ಮೇಲ್ಪಟ್ಟ ವಿಭಾಗದ 50 ಮೀಟರ್ ಬಟರ್‌ಫ್ಲೈ ಸ್ಟ್ರೋಕ್‌ನಲ್ಲಿ (11 ಸ್ಪರ್ಧಿಗಳಲ್ಲಿ) ಚಿನ್ನದ ಪದಕ ಮತ್ತು 100 ಮೀಟರ್ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ (13 ಸ್ಪರ್ಧಿಗಳಲ್ಲಿ) ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.

ಶಿವಮೊಗ್ಗದ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಈಜು ಕೊಳದಲ್ಲಿ ಡಾ.ರವಿ ತರಬೇತಿ ಪಡೆಯುತ್ತಿದ್ದಾರೆ. ಈಗಾಗಲೇ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ:

ಪದಕ ಪಡೆದಿರುವ ಸಂಭ್ರಮ ಹಂಚಿಕೊಂಡಿರುವ ಡಾ.ರವಿ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ ಪದಕವನ್ನು ಪಡೆದಿರುವುದು ತುಂಬಾ ಸಂತೋಷವಾಗುತ್ತಿದೆ. ನಾನು ಗೆದ್ದಿರುವ ಎರಡು ಪದಕಗಳನ್ನು ಮೂಕ ಪ್ರಾಣಿಗಳಿಗೆ ಹಾಗೂ ಹಗಲಿರುಳು ಅವುಗಳ ಸೇವೆ ಮಾಡುತ್ತಿರುವ ನನ್ನೆಲ್ಲಾ ಪಶುವೈದ್ಯ ಮಿತ್ರರಿಗೆ ಹಾಗೂ ಸಿಬ್ಬಂದಿಗಳಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಇಲಾಖೆ ಅಧಿಕಾರಿಗಳು ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದ್ದಾರೆ. ಇಲಾಖೆ ಆಯುಕ್ತರಾದ ಶಿಲ್ಪಾ ನಾಗ್ ಅವರು ರಾಜ್ಯ ಸರ್ಕಾರದ ಅನುಮತಿ ಕೊಡಿಸಿದ್ದಾರೆ. ಶಿವಮೊಗ್ಗದ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಈಜು ಕೊಳದಲ್ಲಿ ತರಬೇತಿದಾರರಾದ ಸಂಗಮೇಶ್ ಪಾರಶೆಟ್ಟಿ, ರಮೇಶ್ ಪಾರಶೆಟ್ಟಿ, ಈಜುಕೊಳದ ಸಿಬ್ಬಂದಿ ಸಾಕಷ್ಟು ತರಬೇತಿ ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !