August 24, 2026
Monday, August 24, 2026
spot_img

ಸಮರಕ್ಕೆ ಸಜ್ಜಾದ ‘ರೋರಿಂಗ್ ಲಯನ್’: ಇಸ್ರೇಲ್ ಸೇನೆಯ ಬತ್ತಳಿಕೆ ಸೇರಿದವು ಸಾವಿರಾರು ಮಿಸೈಲ್‌ಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕವು ಇಸ್ರೇಲ್‌ಗೆ ಬೃಹತ್ ಪ್ರಮಾಣದ ಮಿಲಿಟರಿ ನೆರವು ನೀಡಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಸುಮಾರು 6,500 ಟನ್ ಯುದ್ಧಸಾಮಗ್ರಿ ಮತ್ತು ಅತ್ಯಾಧುನಿಕ ಮಿಲಿಟರಿ ಉಪಕರಣಗಳನ್ನು ಅಮೆರಿಕ ಪೂರೈಸಿದ್ದು, ಇದು ಇರಾನ್ ಮೇಲಿನ ದಾಳಿಯನ್ನು ಇಸ್ರೇಲ್ ಪುನರಾರಂಭಿಸುವ ಸ್ಪಷ್ಟ ಸೂಚನೆಯಾಗಿದೆ.

ಏಪ್ರಿಲ್ 30 ರಂದು ಇಸ್ರೇಲ್ ರಕ್ಷಣಾ ಸಚಿವಾಲಯವು ಈ ಮಾಹಿತಿಯನ್ನು ಅಧಿಕೃತಗೊಳಿಸಿದೆ. ಕಳೆದ ಒಂದು ದಿನದಲ್ಲಿ ಎರಡು ಬೃಹತ್ ಸರಕು ಹಡಗುಗಳು ಮತ್ತು ಹಲವಾರು ಕಾರ್ಗೋ ವಿಮಾನಗಳ ಮೂಲಕ ಈ ಯುದ್ಧ ಸಾಮಗ್ರಿಗಳನ್ನು ತಲುಪಿಸಲಾಗಿದೆ.

ಸಾವಿರಾರು ವಾಯು ಮತ್ತು ಭೂ ಯುದ್ಧಸಾಮಗ್ರಿಗಳು, ಬಲಿಷ್ಠ ಮಿಲಿಟರಿ ಟ್ರಕ್‌ಗಳು ಮತ್ತು ಜಂಟಿ ಲಘು ಯುದ್ಧ ವಾಹನಗಳು.

ಇಸ್ರೇಲ್‌ನ ಪ್ರಮುಖ ಬಂದರುಗಳಾದ ಹೈಫಾ ಮತ್ತು ಅಶ್ಡೋಡ್‌ಗಳಲ್ಲಿ ಈ ಸಾಮಗ್ರಿಗಳನ್ನು ಇಳಿಸಲಾಗಿದ್ದು, ಯುದ್ಧಕಾಲದ ತುರ್ತಿನಂತೆ ತಕ್ಷಣವೇ ಮಿಲಿಟರಿ ನೆಲೆಗಳಿಗೆ ರವಾನಿಸಲಾಗಿದೆ.

ಫೆಬ್ರವರಿ 28 ರಿಂದ ಇರಾನ್ ವಿರುದ್ಧ ಇಸ್ರೇಲ್ ‘ಆಪರೇಷನ್ ರೋರಿಂಗ್ ಲಯನ್’ ಹೆಸರಿನಲ್ಲಿ ಭೀಕರ ಕಾರ್ಯಾಚರಣೆ ನಡೆಸುತ್ತಿದೆ. ಯುದ್ಧ ಆರಂಭವಾದಾಗಿನಿಂದ ಇಲ್ಲಿಯವರೆಗೆ ಇಸ್ರೇಲ್ ಒಟ್ಟು 1,15,600 ಟನ್‌ಗಳಿಗಿಂತ ಹೆಚ್ಚು ಮಿಲಿಟರಿ ನೆರವನ್ನು ಅಮೆರಿಕದಿಂದ ಪಡೆದುಕೊಂಡಿದೆ.

ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಈ ಬಗ್ಗೆ ಪ್ರತಿಕ್ರಿಯಿಸಿ, “ನಮ್ಮ ಶತ್ರುಗಳ ವಿರುದ್ಧ ಯಾವುದೇ ಕ್ಷಣದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಪೂರ್ಣ ಶಕ್ತಿಯೊಂದಿಗೆ ಕಾರ್ಯಾಚರಣೆ ನಡೆಸಲು ಈ ಹೊಸ ಪೂರೈಕೆ ಅತ್ಯಗತ್ಯ. ಇದು ಇಸ್ರೇಲ್ ರಕ್ಷಣಾ ಪಡೆಯ ಶಕ್ತಿಯನ್ನು ಇಮ್ಮಡಿಗೊಳಿಸಲಿದೆ,” ಎಂದು ತಿಳಿಸಿದ್ದಾರೆ.

ಇರಾನ್‌ನ ಪರಮಾಣು ಚಟುವಟಿಕೆಗಳನ್ನು ತಡೆಯುವುದು ಮತ್ತು ಇಸ್ರೇಲ್ ಮೇಲೆ ನಡೆಯುತ್ತಿರುವ ಕ್ಷಿಪಣಿ ದಾಳಿಗಳಿಗೆ ತಕ್ಕ ಉತ್ತರ ನೀಡುವುದು ಅಮೆರಿಕ-ಇಸ್ರೇಲ್ ಜಂಟಿ ಗುರಿಯಾಗಿದೆ. ಸದ್ಯ ಅಮೆರಿಕ ಮತ್ತು ಇರಾನ್ ನಡುವೆ ಇರುವ ಕದನ ವಿರಾಮವು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದು, ಇಸ್ರೇಲ್ ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದೊಡ್ಡ ಮಟ್ಟದ ದಾಳಿ ಸಂಘಟಿಸುವ ಸಾಧ್ಯತೆಯಿದೆ ಎಂದು ರಾಜತಾಂತ್ರಿಕ ತಜ್ಞರು ವಿಶ್ಲೇಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !