ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಂತಾರ’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈಗ ಮತ್ತೊಂದು ರೋಮಾಂಚನಕಾರಿ ಸಾಹಸಕ್ಕೆ ಕೈಹಾಕಿದ್ದಾರೆ. ಭಾರತದಾದ್ಯಂತ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ‘ಮಂಜುಮ್ಮೆಲ್ ಬಾಯ್ಸ್’ ಮಲಯಾಳಂ ಸಿನಿಮಾದ ಖ್ಯಾತ ನಿರ್ದೇಶಕ ಚಿದಂಬರಂ ಜೊತೆ ರಿಷಬ್ ಶೆಟ್ಟಿ ಹೊಸ ಸಿನಿಮಾ ಮಾಡುವುದು ಅಧಿಕೃತವಾಗಿದೆ.
ವಿಶೇಷವೆಂದರೆ, ಈ ಕ್ರಿಯೇಟಿವ್ ಜೋಡಿ ಒಟ್ಟಿಗೆ ಎರಡು ಸಿನಿಮಾಗಳನ್ನು ಮಾಡಲಿದ್ದು, ಅದರಲ್ಲಿ ಮೊದಲನೆಯದು ಕನ್ನಡದ ಕ್ರೀಡಾ ಆಧಾರಿತ ಸಿನಿಮಾವಾಗಿದೆ.
ತಮ್ಮ ವಿಶಿಷ್ಟ ನಟನೆ ಮತ್ತು ವಿಭಿನ್ನ ಕಥೆಗಳ ಆಯ್ಕೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ರಿಷಬ್ ಶೆಟ್ಟಿ ಈ ಬಾರಿ ಕ್ರೀಡಾ ಜಗತ್ತಿನ ಕಥೆಯೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ತೀವ್ರ ಕೌತುಕ ಮೂಡಿಸಿದೆ. ಪ್ರಸ್ತುತ ‘ಜೈ ಹನುಮಾನ್’, ‘ಕಾಂತಾರ-3’ ನಂತಹ ಪ್ರಾಜೆಕ್ಟ್ಗಳಲ್ಲಿ ನಿರತರಾಗಿರುವ ಅವರು, ಈ ಸ್ಪೋರ್ಟ್ಸ್ ಡ್ರಾಮಾ ಮೂಲಕ ತಮ್ಮ ವೃತ್ತಿಜೀವನದಲ್ಲಿ ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ.
ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ ಮುಂತಾದವರ ನಟನೆಯ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ಮೂಲಕ ನೈಜ ಘಟನಾ ಆಧಾರಿತ ಕಥೆಗಳನ್ನು ಎಮೋಷನಲ್ ಆಗಿ ಹೇಳುವಲ್ಲಿ ಹೆಸರುವಾಸಿಯಾದ ಚಿದಂಬರಂ, ಈಗ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮಲಯಾಳಂ ಹಾಗೂ ಕನ್ನಡದ ಈ ಇಬ್ಬರು ಅಪರೂಪದ ಕಥೆಗಾರರು ಒಂದಾಗುತ್ತಿರುವುದರಿಂದ ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವಂತಹ ಎಮೋಷನಲ್ ಹಾಗೂ ರೋಮಾಂಚನಕಾರಿ ಅನುಭವ ಸಿಗುವುದು ಖಚಿತ.
ಪ್ರಸ್ತುತ ಈ ಕ್ರೀಡಾ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಕಥಾಹಂದರ, ಕಲಾವಿದರ ಬಳಗ ಹಾಗೂ ತಾಂತ್ರಿಕ ಬಳಗದ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ.



