July 17, 2026
Friday, July 17, 2026
spot_img

ರಥೋತ್ಸವದ ಮೂಲಕ ಶಿರಸಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಸಂಭ್ರಮದ ಚಾಲನೆ

ಹೊಸದಿಗಂತ ವರದಿ ಶಿರಸಿ:

ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ರಥೋತ್ಸವದ ಮೂಲಕ ಬುಧವಾರ ಅತ್ಯಂತ ಸಡಗಡ ಸಂಭ್ರಮದಿಂದ ಚಾಲನೆಗೊಂಡಿತು.

9ಗಂಟೆ 5 ನಿಮಿಷಕ್ಕೆ ಆರಂಭಗೊಂಡ ರಥೋತ್ಸವ ದಲ್ಲಿ ಮಾರಿಕಾಂಬಾ ದೇವಿಯ ಮುಂಭಾಗ ಲಕ್ಷಾಂತರ ಭಕ್ತರು ಶ್ರೀ ಮಾರಿಕಾಂಬೆಯ ದರ್ಶನ ಪಡೆದು ಕೃತಾರ್ಥರಾದರು.

ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ನಡೆದು ರಥದ ಮೂಲಕ ಶೋಭಾಯಾತ್ರೆ ನಡೆಯಿತು. ಇದಕ್ಕೂ ಮುನ್ನ ಮಾರಿಕಾಂಬಾ ದೇವಾಲಯದ ಎದುರು ಸರ್ವಾಲಂಕಾರ ಭೂಷಿತ ಶ್ರೀ ಮಾರಿಕಾಂಬಾ ದೇವಿಯನ್ನು ಅಲಂಕೃತ ರಥದಲ್ಲಿ ಜಾತ್ರಾ ಗದ್ದುಗೆಯತ್ತ ಕರೆದೊಯ್ಯುವ ವಿಧಿ ವಿಧಾನಗಳು ವಿದ್ಯುಕ್ತವಾಗಿ ವಿವಿಧ ಸಂಪ್ರದಾಯ, ಪರಂಪರೆಯಂತೆ ಆರಂಭಗೊಂಡಿತು.

ಶ್ರೀ ದೇವಿ ರಥಾರೂಢವಾಗುತ್ತಿದ್ದಂತೆಯೇ ನೆರೆದ ಲಕ್ಷಾಂತರ ಭಕ್ತರು ಉಘೇ ಉಘೇ ಎನ್ನುವ ಜಯಘೋಷ ಮೊಳಗಿತು. ವಾದ್ಯ, ಡೊಳ್ಳುಕುಣಿತ, ಚಂಡೆ ವಾದನ, ಹಲವು ಜಾನಪದ ಕಲೆಯೊಂದಿಗೆ ಅದ್ಧೂರಿಯಾಗಿ ರಥೋತ್ಸವದ ಶೋಭಾಯಾತ್ರೆ ಆರಂಭವಾಗಿದೆ. ಮಾರಿ ದೇವಿಯಯನ್ನು ಜಾತ್ರಾ ಚಪ್ಪರಕ್ಕೆ ರಥದ ಮೂಲಕ ಕರೆತರುವ ವೇಳೆಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿ ತಮ್ಮ ವಿಶೇಷ ಹರಕೆಯನ್ನು ಸಲ್ಲಿಸಿದರು.

ಕಿಕ್ಕಿರಿದು ತುಂಬಿದ್ದ ಶ್ರೀ ಮಾರಿಕಾಂಬಾ ದೇವಿಯ ರಥ ಬೀದಿಯಲ್ಲಿ ಮೆರವಣಿಗೆಯುದ್ದಕ್ಕೂ ಭಕ್ತರಿಂದ ಮಾರಿಕಾಂಬೆಯ ಉದ್ಘಾರ ಘೋಷಣೆ ಮೊಳಗಿದವು. ಈ ವೇಳೆ ತಮ್ಮ ಹರಕೆಯಂತೆ ಬಾಳೆಹಣ್ಣು, ಕಡಲೆ, ಅಕ್ಕಿ. ಕೋಳಿಗಳನ್ನು ರಥಕ್ಕೆ ಎಸೆದು ಕೃತಾರ್ಥರಾದರು. ದೇವಾಲಯದ ಧರ್ಮದರ್ಶಿ ಮಂಡಳ ಸದಸ್ಯರು ಬಾಬುದಾರರು ಸಾವಿರಾರು ಮಂದಿ ಕಾರ್ಯಕರ್ತರು, ಲಕ್ಷಾಂತರ ಭಕ್ತರು ಆಗಮಿಸಿ ಭಕ್ತಿಭಾವ ಮೆರೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !