November 5, 2026
Thursday, November 5, 2026
spot_img

ರಾಜಸ್ಥಾನದ ಪಟಾಕಿ ಗೋದಾಮಿನಲ್ಲಿ ಭೀಕರ ಸ್ಫೋಟ: ಇಬ್ಬರು ಸ್ಥಳದಲ್ಲೇ ಸಾ*ವು, ಓರ್ವನ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಸ್ಥಾನದ ನಾಗೌರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾದ್ಲಿ ಗ್ರಾಮದಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಇಲ್ಲಿನ ಪ್ರಸಿದ್ಧ ಪಟಾಕಿ ಉಗ್ರಾಣವೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕಿಲೋಮೀಟರ್‌ಗಳವರೆಗೆ ಕೇಳಿದ ಶಬ್ದ

ಘಟನೆಯ ಸಮಯದಲ್ಲಿ ಗೋದಾಮಿನ ಒಳಗೆ ಒಟ್ಟು ಮೂರು ಜನರಿದ್ದರು ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅದರ ಸದ್ದು ಹಲವು ಕಿಲೋಮೀಟರ್‌ಗಳವರೆಗೆ ಪ್ರತಿಧ್ವನಿಸಿದೆ. ಸ್ಫೋಟದ ರಭಸಕ್ಕೆ ಸಿಲುಕಿದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ಬಿದ್ದಿದ್ದವು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ದೇಹದ ಅವಶೇಷಗಳನ್ನು ಸಂಗ್ರಹಿಸಿ ಶವಾಗಾರಕ್ಕೆ ರವಾನಿಸಿದ್ದಾರೆ. ಇನ್ನು ಗಾಯಗೊಂಡ ವ್ಯಕ್ತಿಯನ್ನು ನಾಗೌರ್‌ನ ಜವಾಹರಲಾಲ್ ನೆಹರು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಳಿಯ-ಮಾವ ದುರ್ಮರಣ

ದುರಂತದಲ್ಲಿ ಮೃತಪಟ್ಟವರನ್ನು ಮೊಹಮ್ಮದ್ ಅಮೀರ್ ಮತ್ತು ಮುಜೀಬ್ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಅಳಿಯ-ಮಾವನ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವಾರು ಮನೆಗಳ ಗೋಡೆಗಳು ಹಾಗೂ ಕಿಟಕಿಗಳು ಜಖಂಗೊಂಡಿವೆ. ಅಗ್ನಿಶಾಮಕ ದಳ, ಅಂಬುಲೆನ್ಸ್ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತಂದಿದ್ದಾರೆ.

ಇದನ್ನೂ ಓದಿ:

ಲೈಸೆನ್ಸ್ ಹೊಂದಿದ್ದ ಗೋದಾಮು

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಾಗೌರ್ ತಹಶೀಲ್ದಾರ್ ನರಸಿಂಗ್ ಟಾಂಕ್ ಮತ್ತು ಸರ್ಕಲ್ ಆಫೀಸರ್ ಜತಿನ್ ಜೈನ್ ಅವರು, “ಈ ಆವರಣದಲ್ಲಿ ದೀರ್ಘಕಾಲದಿಂದ ಗನ್‌ಪೌಡರ್ ಮತ್ತು ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ಗನ್‌ಪೌಡರ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದೇ ಈ ದುರಂತಕ್ಕೆ ಕಾರಣ” ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ಪಟಾಕಿ ಗೋದಾಮು ಅಧಿಕೃತ ಪರವಾನಗಿ ಹೊಂದಿತ್ತು ಮತ್ತು ಮಾಲೀಕರು ಅಗತ್ಯ ದಾಖಲೆಗಳನ್ನು ಹೊಂದಿದ್ದರು. ಈ ವ್ಯವಹಾರದಲ್ಲಿ ಅವರು ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದರು ಎನ್ನಲಾಗಿದ್ದು, ಸ್ಫೋಟದ ನಿಖರ ಕಾರಣ ತಿಳಿಯಲು ಹೆಚ್ಚಿನ ತನಿಖೆ ಮುಂದುವರಿದಿದೆ.

Must Read

Skip to toolbar