ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನದ ಲೇಪಿತ ಛಾವಣಿ ಮೇಲೆ ಕಂಡುಬಂದಿದ್ದ ನಿಗೂಢ ‘ಬಣ್ಣ ಬದಲಾವಣೆ’ ಕೊನೆಗೂ ಬಯಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಭಕ್ತರು ಹಾಗೂ ದೇವಸ್ವಂ ಅಧಿಕಾರಿಗಳಲ್ಲಿ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದ್ದ ಈ ಘಟನೆಯ ಹಿಂದಿನ ಕಾರಣವನ್ನು ಪತ್ತೆಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ದೇಗುಲದ ಚಿನ್ನದ ಛಾವಣಿಯ ಮೂರು ಭಾಗಗಳಲ್ಲಿ ಅಸಾಮಾನ್ಯ ಕಪ್ಪು ಬಣ್ಣದ ಕಲೆಗಳು ಕಾಣಿಸಿಕೊಂಡಿದ್ದವು. ಸುಮಾರು ಎರಡು ಅಡಿ ಉದ್ದದವರೆಗೆ ಬಣ್ಣ ಬದಲಾವಣೆ ಗೋಚರಿಸಿದ್ದರಿಂದ ಆರಂಭದಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಛಾವಣಿಯ ಮೇಲೆ ಯಾವುದೋ ರಾಸಾಯನಿಕ ದ್ರವ ಸುರಿಯಲಾಗಿದೆಯೇ? ಅಥವಾ ಉದ್ದೇಶಪೂರ್ವಕವಾಗಿ ಹಾನಿ ಮಾಡಲಾಗಿದೆಯೇ? ಎಂಬ ಪ್ರಶ್ನೆಗಳು ಮೂಡಿದ್ದವು. ವಿಷಯದ ಗಂಭೀರತೆಯನ್ನು ಗಮನಿಸಿದ ದೇವಸ್ವಂ ಮಂಡಳಿ ಹಾಗೂ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಹೈಕೋರ್ಟ್ ಅನುಮತಿ ಪಡೆದು ಬಣ್ಣ ಬದಲಾದ ಭಾಗವನ್ನು ಸ್ವಚ್ಛಗೊಳಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ತನಿಖೆಯಲ್ಲಿ ಹೊರಬಿದ್ದ ಅಂಶವೇನು?
ಪ್ರಾಥಮಿಕ ತನಿಖೆ ಮತ್ತು ಪರಿಶೀಲನೆಯ ಬಳಿಕ, ಛಾವಣಿಯ ಮೇಲಿನ ಬಣ್ಣ ಬದಲಾವಣೆಗೆ ಭಕ್ತರು ಅರ್ಪಿಸಿದ್ದ ತುಪ್ಪವೇ ಕಾರಣ ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕೆಲವು ಯಾತ್ರಿಕರು ಸಂಪ್ರದಾಯದ ಭಾಗವಾಗಿ ತುಪ್ಪವನ್ನು ಛಾವಣಿಯತ್ತ ಎರಚಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ತುಪ್ಪ ಛಾವಣಿಯ ಮೇಲೆ ಹರಿದು ಚಿನ್ನದ ಲೇಪಿತ ಭಾಗದಲ್ಲಿ ಕಪ್ಪು ಬಣ್ಣದ ಕಲೆಗಳಂತೆ ಕಾಣಿಸಿಕೊಂಡಿತ್ತು. ವಿಶೇಷವಾಗಿ ದೇವಾಲಯದ ಮುಂಭಾಗ ಹಾಗೂ ಹಿಂಭಾಗದಲ್ಲಿ ಈ ರೀತಿಯ ಬಣ್ಣ ವ್ಯತ್ಯಾಸ ಕಂಡುಬಂದಿದೆ.
ಜನವರಿಯಲ್ಲೇ ನಡೆದಿತ್ತೇ ಬೆಳವಣಿಗೆ?
ಅಧಿಕಾರಿಗಳ ಅಂದಾಜಿನ ಪ್ರಕಾರ, ಈ ಬಣ್ಣ ಬದಲಾವಣೆ ಈ ವರ್ಷದ ಜನವರಿ 2 ರಿಂದ 7ರ ನಡುವಿನ ಅವಧಿಯಲ್ಲಿ ಸಂಭವಿಸಿರಬಹುದು. ಅದೇ ಸಮಯದಲ್ಲಿ ಹೆಚ್ಚಿನ ಯಾತ್ರಿಕರ ಸಂಚಾರ ಇದ್ದ ಕಾರಣ, ಕೆಲ ಭಕ್ತರು ತುಪ್ಪ ಸುರಿದಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಲಾಗಿದೆ.
ಈ ಚಿನ್ನದ ಛಾವಣಿಯ ಬಣ್ಣ ಬದಲಾವಣೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಊಹಾಪೋಹಗಳು ಹರಿದಾಡಿದ್ದವು. ಇದೀಗ ಬಂದಿರುವ ಪರೀಕ್ಷಾ ವರದಿಯಲ್ಲಿ ಇಲ್ಲಿ ಯಾವುದೇ ವಿಧದ ಹಾನಿಕಾರಕ ರಾಸಾಯನಿಕ ಅಥವಾ ಉದ್ದೇಶಪೂರ್ವಕ ಕೃತ್ಯದ ಸುಳಿವು ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ.



