ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ಅಥವಾ ನಿಂದನೆ ಪದಗಳನ್ನು ಬಳಸಿದರೆ ಅದನ್ನು ಕಾನೂನಿನ ಪ್ರಕಾರ ಅಶ್ಲೀಲತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಶ್ಲೀಲತೆ ಸಾಬೀತಾಗಬೇಕಾದರೆ, ಬಳಸಿದ ಪದಗಳು ಕಾಮಪ್ರಚೋದಕ ಸ್ವರೂಪದ್ದಾಗಿರಬೇಕು ಮತ್ತು ಸಾರ್ವಜನಿಕರಿಗೆ ಅಸಹ್ಯ ಅಥವಾ ಅಸಮಾಧಾನ ಉಂಟುಮಾಡುವ ರೀತಿಯಲ್ಲಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಏನು ಹೇಳಿತು ಸುಪ್ರೀಂ ಕೋರ್ಟ್?
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠ, ಅಸಭ್ಯ ಭಾಷೆ, ಬೈಗುಳ ಅಥವಾ ನಿಂದನೆ ಪದಗಳನ್ನು ಬಳಸುವುದು ಮತ್ತು ಕಾನೂನಿನ ಅರ್ಥದಲ್ಲಿ ಅಶ್ಲೀಲತೆ ಎಂಬುದು ಎರಡು ವಿಭಿನ್ನ ವಿಚಾರಗಳು ಎಂದು ಹೇಳಿದೆ. ಕೇವಲ ಅಸಭ್ಯ ಪದ ಬಳಕೆಯ ಆಧಾರದಲ್ಲಿ ಅಶ್ಲೀಲತೆ ಪ್ರಕರಣ ದಾಖಲಿಸಲಾಗುವುದಿಲ್ಲ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ
ತಮಿಳುನಾಡಿನ 70 ವರ್ಷದ ವ್ಯಕ್ತಿಯೊಬ್ಬರ ವಿರುದ್ಧ ಭೂ ವಿವಾದದ ವೇಳೆ ಅಸಭ್ಯ ಪದಗಳಿಂದ ನಿಂದಿಸಿದ್ದರು ಹಾಗೂ ಹಲ್ಲೆ ಆರೋಪ ಕೇಳಿಬಂದಿತ್ತು. ಕೆಳ ನ್ಯಾಯಾಲಯವು ವಿವಿಧ ಐಪಿಸಿ ಸೆಕ್ಷನ್‌ಗಳಡಿ ಶಿಕ್ಷೆ ವಿಧಿಸಿತ್ತು. ಬಳಿಕ ಹೈಕೋರ್ಟ್ ಕೆಲವು ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಿದ್ದರೂ, ಕೆಲವು ಶಿಕ್ಷೆಗಳನ್ನು ಮುಂದುವರಿಸಿತ್ತು.
ಇದನ್ನೂ ಓದಿ:
ಶಿಕ್ಷೆಯಲ್ಲಿ ಬದಲಾವಣೆ
ಪ್ರಕರಣದ ಸಂದರ್ಭ, ಆರೋಪಿಯ ವಯಸ್ಸು ಹಾಗೂ ಆರೋಗ್ಯವನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಜೈಲು ಶಿಕ್ಷೆಯನ್ನು ಕಡಿತಗೊಳಿಸಿ, ನ್ಯಾಯಾಲಯ ಕಲಾಪ ಮುಗಿಯುವವರೆಗಿನ ಸಾಂಕೇತಿಕ ಶಿಕ್ಷೆ ವಿಧಿಸಿದೆ. ಜೊತೆಗೆ ಎರಡು ತಿಂಗಳೊಳಗೆ ₹50,000 ದಂಡ ಪಾವತಿಸುವಂತೆ ಆದೇಶ ನೀಡಿದೆ.
ಕಾನೂನಿನ ಮಹತ್ವದ ಸ್ಪಷ್ಟನೆ
ಈ ತೀರ್ಪಿನ ಮೂಲಕ ಅಶ್ಲೀಲತೆ, ನಿಂದನೆ ಮತ್ತು ಅಸಭ್ಯ ಭಾಷೆ ನಡುವಿನ ಕಾನೂನು ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ಭವಿಷ್ಯದ ಇಂತಹ ಪ್ರಕರಣಗಳಿಗೆ ಇದು ಪ್ರಮುಖ ಮಾರ್ಗದರ್ಶಕ ತೀರ್ಪಾಗಲಿದೆ.



