ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಗಮನ ಸೆಳೆದ ಪಾಣಿಹಟಿ ಕ್ಷೇತ್ರದ ಫಲಿತಾಂಶ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಆರ್‌ಜಿ ಕರ್ ಅತ್ಯಾಚಾರ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ ಭರ್ಜರಿ ಗೆಲುವು ಸಾಧಿಸಿದ ಬಳಿಕ, ಈ ಜಯವನ್ನು ವೈಯಕ್ತಿಕ ವಿಜಯವಲ್ಲ, ಮಹಿಳೆಯರ ಭದ್ರತೆಗಾಗಿ ಜನರು ನೀಡಿದ ಸ್ಪಷ್ಟ ಸಂದೇಶ ಎಂದು ಬಣ್ಣಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಸಾಮಾನ್ಯ ಚುನಾವಣೆ ಅಲ್ಲ; ಅನ್ಯಾಯಕ್ಕೆ ಒಳಗಾದವರ ಧ್ವನಿಗೆ ದೊರೆತ ಬೆಂಬಲ ಎಂದು ಹೇಳಿದರು. ತಮ್ಮ ಕುಟುಂಬ ಅನುಭವಿಸಿದ ನೋವು, ನ್ಯಾಯಕ್ಕಾಗಿ ನಡೆದ ಹೋರಾಟ ಹಾಗೂ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಕುರಿತ ಚಿಂತೆ ಮತದಾರರ ಮನಸ್ಸಿಗೆ ತಟ್ಟಿದೆ ಎಂದು ಅಭಿಪ್ರಾಯಪಟ್ಟರು. ಬಂಗಾಳದ ಮಹಿಳೆಯರು ಸುರಕ್ಷಿತ ಬದುಕು ಬಯಸುತ್ತಿದ್ದಾರೆ ಎಂಬ ಸಂದೇಶ ಈ ಫಲಿತಾಂಶದಿಂದ ಹೊರಬಂದಿದೆ ಎಂದರು.
ಇದನ್ನೂ ಓದಿ:
ಪ್ರಚಾರದ ಅವಧಿಯಲ್ಲಿ ಸಾಕಷ್ಟು ಒತ್ತಡ, ಟೀಕೆ ಹಾಗೂ ಅಡ್ಡಿಪಡಿಸುವ ಪ್ರಯತ್ನಗಳು ನಡೆದರೂ, ಜನರ ಬೆಂಬಲವೇ ತಮ್ಮ ಶಕ್ತಿಯಾಯಿತು ಎಂದು ರತ್ನಾ ಹೇಳಿದರು.
ಪಾಣಿಹಟಿ ಕ್ಷೇತ್ರದ ಮತದಾರರು ದೊಡ್ಡ ಅಂತರದಲ್ಲಿ ಬೆಂಬಲ ಸೂಚಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಂತಿಮ ಮತ ಎಣಿಕೆಯಲ್ಲಿ ರತ್ನಾ ದೇಬ್ನಾಥ್ ಭರ್ಜರಿ ಮುನ್ನಡೆಯೊಂದಿಗೆ ಗೆಲುವು ಸಾಧಿಸಿದ್ದು, ಈ ಫಲಿತಾಂಶ ಮಹಿಳಾ ಸುರಕ್ಷತೆ, ನ್ಯಾಯ ಮತ್ತು ರಾಜಕೀಯ ಬದಲಾವಣೆಯ ಬೇಡಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.



