ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿ, ಹಿಂತಿರುಗುವ ವೇಳೆ ಭಾರತೀಯ ಪರ್ವತಾರೋಹಿಗಳಿಬ್ಬರು ಮೃತಪಟ್ಟಿದ್ದಾರೆ.
ಮೃತ ಪರ್ವತಾರೋಹಿಗಳನ್ನು ಅರುಣ್ ತಿವಾರಿ ಮತ್ತು ಸಂದೀಪ್ ಅರೆ ಎಂದು ಗುರುತಿಸಲಾಗಿದೆ. ಸಂದೀಪ್ ಅರೆ ಬುಧವಾರ ಹಾಗೂ ಅರುಣ್ ಕುಮಾರ್ ತಿವಾರಿ ಗುರುವಾರ ಸಂಜೆ ಎವರೆಸ್ಟ್ ಶಿಖರ ತಲುಪಿದ್ದರು. ಆದರೆ ಶಿಖರದಿಂದ ಕೆಳಗಿಳಿಯುವ ವೇಳೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ದೇಹ ಸಾಕಷ್ಟು ದಣಿದಿತ್ತು
ಈ ಕುರಿತು ಮಾಹಿತಿ ನೀಡಿದ ನೇಪಾಳದ ಎಕ್ಸ್ಪೆಡಿಶನ್ ಆಪರೇಟರ್ಸ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ, ಶಿಖರ ಏರಿದ ಸಂಭ್ರಮದಲ್ಲಿದ್ದ ಇಬ್ಬರು ತೀವ್ರ ದೇಹದ ಬಳಲಿಕೆಯಲ್ಲೂ ಕೆಳಕ್ಕಿಳಿಯಲು ಮುಂದಾಗಿದ್ದರು. ಅನುಭವಿ ಕ್ಲೈಂಬಿಂಗ್ ಶೆರ್ಪಾ ಮಾರ್ಗದರ್ಶಕರು ಇಬ್ಬರನ್ನು ಬದುಕಿಸಲು ಪ್ರಯತ್ನಿಸಿದರೂ, ತೀವ್ರ ದಣಿದಿದ್ದ ಪರ್ವತಾರೋಹಿ ಅಂತಿಮವಾಗಿ ಪ್ರಾಣ ಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮೃತರ ಸಂಖ್ಯೆ ಐದಕ್ಕೆ ಏರಿಕೆ
ಎವರೆಸ್ಟ್ ಏರಿಕೆ ವೇಳೆ ಹವಾಮಾನ ವೈಪರೀತ್ಯ, ಕಡಿಮೆ ಆಮ್ಲಜನಕ ಮತ್ತು ತೀವ್ರ ಹಿಮಪಾತದಂತಹ ಅಪಾಯಗಳು ಪರ್ವತಾರೋಹಿಗಳಿಗೆ ದೊಡ್ಡ ಸವಾಲಾಗಿವೆ. ಮೌಂಟ್ ಎವರೆಸ್ಟ್ನ ಪರ್ವತಾರೋಹಣ ಆರಂಭವಾದ ದಿನದಿಂದ ಇಲ್ಲಿಯವರೆಗೂ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ. ಇದಕ್ಕೂ ಮುನ್ನ ನೇಪಾಳ ಪರ್ವಾತರೋಹಿಗಳು ಮೃತಪಟ್ಟಿದ್ದರು. ಇತ್ತ ಬುಧವಾರ ಒಂದೇ ದಿನ ನೇಪಾಳದ ಕಡೆಯಿಂದ 274 ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿ ಹೊಸ ಇತಿಹಾಸ ಸೃಷ್ಟಿಸಿದ್ದರು.



