August 12, 2026
Wednesday, August 12, 2026
spot_img

Unfit| ತಡರಾತ್ರಿ ಊಟ ಮಾಡೋ ಮುನ್ನ ಇದನ್ನೊಮ್ಮೆ ಓದಿ! ನಿಮ್ಮಆರೋಗ್ಯ ಹಾಳು ಮಾಡುತ್ತಿರುವ ‘ಲೇಟ್ ನೈಟ್ ಡಿನ್ನರ್’

ಇಂದಿನ ಆಧುನಿಕ ಜೀವನಶೈಲಿ, ತಡರಾತ್ರಿಯವರೆಗೆ ಕೆಲಸ ಮಾಡುವ ಆಫೀಸ್ ಶಿಫ್ಟ್‌ಗಳು ಮತ್ತು ಮೊಬೈಲ್ ಬಳಕೆಯ ಅಭ್ಯಾಸದಿಂದಾಗಿ ಹೆಚ್ಚಿನವರು ರಾತ್ರಿ 10 ಅಥವಾ 11 ಗಂಟೆಯ ನಂತರ ಊಟ ಮಾಡುತ್ತಾರೆ. ನೋಡುಗರಿಗೆ ಇದು ಸಾಮಾನ್ಯ ಅಭ್ಯಾಸ ಎನಿಸಿದರೂ, ನಮ್ಮ ದೇಹದ ಜೈವಿಕ ಗಡಿಯಾರದ ಪ್ರಕಾರ ಇದು ಅತ್ಯಂತ ಹಾನಿಕಾರಕ ಅಭ್ಯಾಸವಾಗಿದೆ. ಪ್ರಕೃತಿಯ ನಿಯಮದಂತೆ ಸೂರ್ಯ ಮುಳುಗಿದ ನಂತರ ನಮ್ಮ ದೇಹದ ಜೀರ್ಣ ಶಕ್ತಿಯು ನಿಧಾನಗೊಳ್ಳುತ್ತದೆ. ಇಂತಹ ಸಮಯದಲ್ಲಿ ತಡವಾಗಿ ಊಟ ಮಾಡುವುದರಿಂದ ದೇಹವು ಹತ್ತಾರು ಕಾಯಿಲೆಗಳ ಗೂಡಾಗಬಹುದು. ರಾತ್ರಿ ತಡವಾಗಿ ಊಡ ಮಾಡುವುದರಿಂದ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿಯೋಣ.

ಜೀರ್ಣಕ್ರಿಯೆಯ ಏರುಪೇರು ಮತ್ತು ಎದೆಯುರಿ

ರಾತ್ರಿ ತಡವಾಗಿ ಊಟ ಮಾಡಿ ತಕ್ಷಣ ಮಲಗುವುದರಿಂದ ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣಿಸಲು ಬಿಡುಗಡೆಯಾಗುವ ಆಮ್ಲವು ಅನ್ನನಾಳದ ಕಡೆಗೆ ಚಲಿಸುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಆಸಿಡ್ ರಿಫ್ಲಕ್ಸ್’ ಎನ್ನಲಾಗುತ್ತದೆ. ಇದರಿಂದ ತೀವ್ರ ಎದೆಯುರಿ, ಹುಳಿ ತೇಗು ಮತ್ತು ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಆಹಾರ ಸರಿಯಾಗಿ ಜೀರ್ಣವಾಗದೆ ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆಯ ಸಮಸ್ಯೆ ಎದುರಾಗುತ್ತದೆ.

ತೂಕ ಹೆಚ್ಚಳ ಮತ್ತು ಬೊಜ್ಜು

ದೇಹದ ಚಯಾಪಚಯ ಕ್ರಿಯೆ ರಾತ್ರಿಯಾಗುತ್ತಿದ್ದಂತೆ ಮಂದಗತಿಯನ್ನು ತಲುಪುತ್ತದೆ. ತಡರಾತ್ರಿಯಲ್ಲಿ ನಾವು ಸೇವಿಸುವ ಕ್ಯಾಲೊರಿಗಳನ್ನು ಕರಗಿಸಲು ದೇಹಕ್ಕೆ ಯಾವುದೇ ದೈಹಿಕ ಶ್ರಮ ಸಿಗುವುದಿಲ್ಲ. ಪರಿಣಾಮವಾಗಿ, ಆ ಆಹಾರವು ಶಕ್ತಿಯಾಗಿ ಬದಲಾಗುವ ಬದಲು ನೇರವಾಗಿ ಕೊಬ್ಬಿನ ರೂಪದಲ್ಲಿ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಶೇಖರಣೆಯಾಗಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ.

ನಿದ್ರಾಹೀನತೆ ಮತ್ತು ಆತಂಕ

ನಾವು ಮಲಗಿದಾಗ ನಮ್ಮ ಇಡೀ ದೇಹ ಮತ್ತು ಮೆದುಳಿಗೆ ವಿಶ್ರಾಂತಿ ಸಿಗಬೇಕು. ಆದರೆ ತಡವಾಗಿ ಊಟ ಮಾಡಿದಾಗ, ದೇಹವು ಆಹಾರವನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರತವಾಗಿರುತ್ತದೆ. ಇದರಿಂದ ಮಿದುಳು ಸಕ್ರಿಯವಾಗಿಯೇ ಉಳಿದು ಆಳವಾದ ನಿದ್ರೆಗೆ  ಜಾರಲು ಸಾಧ್ಯವಾಗುವುದಿಲ್ಲ. ತಡರಾತ್ರಿ ಊಟ ಮಾಡುವವರಲ್ಲಿ ತಲೆನೋವು, ಬೆಳಿಗ್ಗೆ ಎದ್ದಾಗ ಸುಸ್ತು ಮತ್ತು ಮಾನಸಿಕ ಕಿರಿಕಿರಿ ಸಾಮಾನ್ಯವಾಗಿರುತ್ತದೆ.

ಮಧುಮೇಹ ಮತ್ತು ಹೃದಯ ಕಾಯಿಲೆಯ ಅಪಾಯ

ರಾತ್ರಿ ತಡವಾಗಿ ತಿನ್ನುವ ಅಭ್ಯಾಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಇನ್ಸುಲಿನ್ ಹಾರ್ಮೋನ್‌ನ ಕಾರ್ಯಕ್ಷಮತೆಯನ್ನು ಕುಂದಿಸುತ್ತದೆ. ಇದು ದೀರ್ಘಕಾಲದಲ್ಲಿ ಟೈಪ್-2 ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ. ಇದರೊಂದಿಗೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ ರಕ್ತದೊತ್ತಡ ಏರಲು ಶುರುವಾಗುತ್ತದೆ, ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:

ಆರೋಗ್ಯಕರ ಬದಲಾವಣೆಗೆ ಸರಳ ಸೂತ್ರಗಳು:

ರಾತ್ರಿ 7 ರಿಂದ ಕಡ್ಡಾಯವಾಗಿ 8:30 ರ ಒಳಗಾಗಿ ಊಟ ಮುಗಿಸುವ ಅಭ್ಯಾಸ ಮಾಡಿಕೊಳ್ಳಿ.

ಊಟ ಮಾಡಿದ ತಕ್ಷಣ ಹಾಸಿಗೆಗೆ ಹೋಗಬಾರದು. ಊಟ ಮತ್ತು ಮಲಗುವ ಸಮಯದ ನಡುವೆ ಕನಿಷ್ಠ 2 ಗಂಟೆಗಳ ಅಂತರ ಇರಬೇಕು.

ಅನಿವಾರ್ಯವಾಗಿ ರಾತ್ರಿ ತಡವಾದರೆ ಬಿರಿಯಾನಿ, ಚಪಾತಿ ಅಥವಾ ಜಂಕ್ ಫುಡ್ ಬದಲಿಗೆ ಸೂಪ್, ಗಂಜಿ ಅಥವಾ ಹಣ್ಣುಗಳಂತಹ ಹಗುರವಾದ ಆಹಾರ ಸೇವಿಸುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !