October 9, 2026
Friday, October 9, 2026
spot_img

ವಿಶ್ವದ ಅತ್ಯಂತ ಸಕ್ರಿಯ ಉಗ್ರನ ಆಟ ಮುಗಿಸಿದ ಅಮೆರಿಕನ್ ಪಡೆ: ಟ್ರಂಪ್ ಅಧಿಕೃತ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆ ಐಸಿಸ್ಗೆ ಅಮೆರಿಕ ಭಾರಿ ಹೊಡೆತ ನೀಡಿದೆ. ಐಸಿಸ್ ಸಂಘಟನೆಯ ಜಾಗತಿಕ ಎರಡನೇ ಅತ್ಯುನ್ನತ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿಯನ್ನು ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.

ಅಮೆರಿಕನ್ ವಿಶೇಷ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ಜಂಟಿಯಾಗಿ ನಡೆಸಿದ ಅತ್ಯಂತ ನಿಖರ ಹಾಗೂ ಸಂಕೀರ್ಣ ಜಾಗತಿಕ ಕಾರ್ಯಾಚರಣೆಯಲ್ಲಿ ಈ ಯಶಸ್ಸು ಸಿಕ್ಕಿದೆ. ಟ್ರೂತ್ ಸೋಷಿಯಲ್ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್, “ನನ್ನ ನೇರ ಸೂಚನೆಯ ಮೇರೆಗೆ ನಮ್ಮ ಧೈರ್ಯಶಾಲಿ ಪಡೆಗಳು ವಿಶ್ವದ ಅತ್ಯಂತ ಸಕ್ರಿಯ ಉಗ್ರನನ್ನು ಯುದ್ಧಭೂಮಿಯಿಂದ ಶಾಶ್ವತವಾಗಿ ಮಟ್ಟ ಹಾಕಿವೆ” ಎಂದು ತಿಳಿಸಿದ್ದಾರೆ.

ಅಬು ಬಕರ್ ಮುಹಮ್ಮದ್ ಅಲ್-ಮೈನುಕಿ ಎಂದೂ ಕರೆಯಲ್ಪಡುವ ಈತ ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ಅಡಗಿ ಕುಳಿತಿದ್ದ. ಆಫ್ರಿಕಾದಲ್ಲಿ ಅಡಗಿಕೊಂಡರೆ ಯಾರ ಕೈಗೂ ಸಿಗುವುದಿಲ್ಲ ಎಂದು ಆತ ಭಾವಿಸಿದ್ದ, ಆದರೆ ಆತನ ಪ್ರತಿಯೊಂದು ಮೂವ್‌ಮೆಂಟ್‌ನ ಸಂಪೂರ್ಣ ಮಾಹಿತಿ ನಮ್ಮ ಗುಪ್ತಚರ ಮೂಲಗಳ ಬಳಿ ಇತ್ತು ಎಂದು ಟ್ರಂಪ್ ಹೇಳಿದ್ದಾರೆ. ಈ ಕಾರ್ಯಾಚರಣೆಗೆ ಸಂಪೂರ್ಣ ಸಹಕಾರ ನೀಡಿದ ನೈಜೀರಿಯಾ ಸರ್ಕಾರಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.

Must Read